ಬೆಂಗಳೂರು: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ವಿರುದ್ಧ ಮಾಜಿ ಉದ್ಯೋಗಿಯೊಬ್ಬರು ಮಾಡಿರುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಗ್ರೌಂಡ್ ಸ್ಟಾಫ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್ ಜಂಶೀದ್ ವೈ., ಸಂಸ್ಥೆಯಲ್ಲಿನ “ಮಾನವೀಯತೆ ಇಲ್ಲದ ಕೆಲಸದ ಸಂಸ್ಕೃತಿ”ಯಿಂದಲೇ ತಮ್ಮ ಕನಸಿನ ಉದ್ಯೋಗ ತೊರೆಯಬೇಕಾಯಿತು ಎಂದು ಆರೋಪಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಜಂಶೀದ್, ಕೇವಲ ಟೈ ಧರಿಸದೆ ಕೆಲಸಕ್ಕೆ ಬಂದಿದ್ದಕ್ಕಾಗಿ ತಮ್ಮನ್ನು ಸಾರ್ವಜನಿಕವಾಗಿ ಅವಮಾನ ಮಾಡಲಾಗಿದ್ದು, ಮೇಲ್ವಿಚಾರಕಿಯ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ.
‘ಕ್ಷಮೆ ಕೇಳಿದರೂ ಅವಮಾನ ನಿಲ್ಲಲಿಲ್ಲ’
ಜಂಶೀದ್ ಅವರ ಪ್ರಕಾರ, ಘಟನೆ ನಡೆದ ದಿನ ಅವರು ಟರ್ಮಿನಲ್-1ರಲ್ಲಿ ವಾರದ ಪರಿಶೀಲನಾ ಕಾರ್ಯದಲ್ಲಿದ್ದ ವೇಳೆ ಅಧಿಕಾರಿಯೊಬ್ಬರು ಟೈ ಧರಿಸದಿರುವುದನ್ನು ಗಮನಿಸಿದ್ದರು.
ತಪ್ಪು ಅಜಾಗರೂಕತೆಯಿಂದ ಆಗಿದ್ದು, ಕೂಡಲೇ ಕ್ಷಮೆ ಕೇಳಿ ಮುಂದೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ್ದರೂ, ಮೇಲ್ವಿಚಾರಕಿಯ ಬಳಿಯೂ ಕ್ಷಮೆ ಕೇಳುವಂತೆ ಸೂಚಿಸಲಾಯಿತು. ಅದನ್ನೂ ಪಾಲಿಸಿದ ಬಳಿಕ, ಮೇಲ್ವಿಚಾರಕಿಯ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಆದೇಶಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.
“ವೃತ್ತಿಪರ ಕೆಲಸದ ಸ್ಥಳದಲ್ಲಿ ಇದು ಅತ್ಯಂತ ಅವಮಾನಕಾರಿ ಮತ್ತು ಮಾನವೀಯತೆಗೆ ವಿರುದ್ಧವಾದ ನಡೆ ಎಂದು ಭಾವಿಸಿ ನಾನು ಗೌರವಪೂರ್ವಕವಾಗಿ ನಿರಾಕರಿಸಿದೆ. ಬಳಿಕ ತಕ್ಷಣವೇ ಟರ್ಮಿನಲ್‌ನಿಂದ ಹೊರಹೋಗುವಂತೆ ಸೂಚಿಸಲಾಯಿತು,” ಎಂದು ಅವರು ಹೇಳಿದ್ದಾರೆ.
‘ಸಿಸಿಟಿವಿಯಲ್ಲೂ ನನ್ನ ಹಾಜರಾತಿ ದೃಢಪಡಿಸಲಿಲ್ಲ’
ಘಟನೆಯ ಬಳಿಕ ಇಂಡಿಗೋದ ನೈತಿಕತೆ ಮತ್ತು ನಿಯಮ ಪಾಲನಾ (Ethics & Compliance) ವಿಭಾಗಕ್ಕೆ ದೂರು ನೀಡಿದ್ದಾಗಿ ಜಂಶೀದ್ ತಿಳಿಸಿದ್ದಾರೆ. ಆದರೆ ತನಿಖೆಯ ಫಲಿತಾಂಶದಿಂದ ತೃಪ್ತಿ ಆಗಲಿಲ್ಲ ಎಂದು ಹೇಳಿದ್ದಾರೆ.
ಸಂಸ್ಥೆ, ಘಟನೆ ನಡೆದ ದಿನ ಅವರು ಟರ್ಮಿನಲ್-1ರಲ್ಲಿ ಇದ್ದುದನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ದೃಢೀಕರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿತ್ತು. ಆದರೆ ಸಂಪೂರ್ಣ ಸಿಸಿಟಿವಿ ನಿಗಾದಲ್ಲಿರುವ ಪ್ರದೇಶದಲ್ಲಿ ತಮ್ಮ ಹಾಜರಾತಿಯನ್ನೇ ದೃಢೀಕರಿಸಲಾಗಲಿಲ್ಲ ಎಂಬುದು ಆಶ್ಚರ್ಯಕರವಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಇಂಡಿಗೋ ಪ್ರತಿಕ್ರಿಯೆ ಇನ್ನೂ ಇಲ್ಲ
ಜಂಶೀದ್ ಅವರ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉದ್ಯೋಗಿಗಳೊಂದಿಗೆ ನಡೆದುಕೊಳ್ಳುವ ವಿಧಾನ, ಕಾರ್ಯಸ್ಥಳದಲ್ಲಿನ ಗೌರವ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಕೆಲಸದ ಸಂಸ್ಕೃತಿ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿವೆ.
ಆದರೆ, ಈ ಆರೋಪಗಳ ಕುರಿತು ಇಂಡಿಗೋ ಸಂಸ್ಥೆ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಸದ್ಯ ಸಾರ್ವಜನಿಕವಾಗಿ ಲಭ್ಯವಿರುವುದು ಮಾಜಿ ಉದ್ಯೋಗಿಯ ಆರೋಪಗಳು ಮಾತ್ರವಾಗಿದ್ದು, ಈ ಪ್ರಕರಣದ ಸತ್ಯಾಸತ್ಯತೆ ಸಂಸ್ಥೆಯ ಅಧಿಕೃತ ಸ್ಪಷ್ಟನೆ ಹಾಗೂ ಮುಂದಿನ ತನಿಖೆಯ ಬೆಳವಣಿಗೆಗಳ ಬಳಿಕವೇ ಸ್ಪಷ್ಟವಾಗಲಿದೆ.















