ನವದೆಹಲಿ: ಮಾಜಿ ವಿದೇಶಾಂಗ ಸಚಿವೆ, ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಆ.6ರಂದು ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.
ಅವರಿಗೆ 67 ವರ್ಷ ವಯಸ್ಸಾಗಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದಾಗ ಕ್ಯಾಬಿನೆಟ್ ನಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಈ ಬಾರಿ ಆರೋಗ್ಯ ಸಮಸ್ಯೆ ಕಾರಣಕ್ಕೆ ಮೋದಿ ಸಂಪುಟದಿಂದ ಹೊರಗೆ ಉಳಿದಿದ್ದರು.
ಸುಷ್ಮಾ ಸ್ವರಾಜ್ ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ವಕೀಲೆ. ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನ ಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿದ್ದಾರು. 1973ರಲ್ಲಿ ಸುಪ್ರೀಂ ಕೋರ್ಟ್ ವಕೀಲೆಯಾಗಿ ಕಾರ್ಯ ಆರಂಭಿಸಿದ್ದರು. ದೇಶದಲ್ಲಿ ಬಿಜೆಪಿ ಪಕ್ಷದಲ್ಲಿ ಪ್ರಬಲ ಮಹಿಳಾ ನಾಯಕಿಯಾಗಿ ಬೆಳೆದಿದ್ದರು.












