ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ (61) ಅವರಿಗೆ ಲಘು ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆಗಾಗಿ ನವದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಪಿಲ್ ಅವರಿಗೆ ಶುಕ್ರವಾರ ಬೆಳಿಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಆ್ಯಂಜಿಯೊಪ್ಲಾಸ್ಟಿ ಮಾಡಲಾಗುತ್ತಿದೆ. ಸದ್ಯ ಕಪಿಲ್ ದೇವ್ ಅವರು ಆರೋಗ್ಯವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
1983ರಲ್ಲಿ ಭಾರತ ಮೊದಲ ಬಾರಿಗೆ ಕಪಿಲ್ ದೇವ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದುಗೊಂಡಿತ್ತು. ಈ ವಿಶ್ವಕಪ್ ನಲ್ಲಿ ಅಲ್ ರೌಂಡರ್ ಪ್ರದರ್ಶನ ನೀಡಿ ಜಗತ್ತಿನ ಗಮನ ಸೆಳೆದಿದ್ದರು. ಭಾರತ ಪರ ಶ್ರೇಷ್ಠ ಅಲ್ ರೌಂಡರ್ ಆಟಗಾರನಾಗಿ ಕಪಿಲ್ ಗುರುತಿಸಿಕೊಂಡಿದ್ದರು. 1992ರ ವಿಶ್ವಕಪ್ ಬಳಿಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.