ಆಸ್ಟ್ರೇಲಿಯಾದ ಪ್ರಖ್ಯಾತ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವು

ದೆಹಲಿ: ಕ್ರಿಕೆಟ್ ಪ್ರೇಮಿಗಳಿಗೊಂದು ಆಘಾತ ಕಾದಿದೆ. ಮಾರ್ಚ್ 4 ರಂದು ಹೃದಯಾಘಾತದಿಂದ ನಿಧನರಾದ ಆಸ್ಟ್ರೇಲಿಯಾ ಆಟಗಾರ ಶೇನ್ ವಾರ್ನ್ ನಿಧನರಾದ ಸುಮಾರು ಎರಡು ತಿಂಗಳ ನಂತರ ಅವರ ಸಹ ಆಟಗಾರನಾಗಿದ್ದ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತವೊಂದರಲ್ಲಿ ಮೃತ ಪಟ್ಟಿದ್ದಾರೆ. ಟೆಸ್ಟ್ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

46 ವರ್ಷ ವಯಸ್ಸಿನ ಮತ್ತು ಆಸ್ಟ್ರೇಲಿಯಾ ಪರ 26 ಬಾರಿ ಆಡಿರುವ ಸೈಮಂಡ್ಸ್ ಶನಿವಾರ ರಾತ್ರಿ ಟೌನ್ಸ್‌ವಿಲ್ಲೆಯಿಂದ 50 ಕಿಮೀ ದೂರದಲ್ಲಿರುವ ಹರ್ವೆ ರೇಂಜ್‌ನಲ್ಲಿ ಏಕ ವಾಹನ ದುರ್ಘಟನೆಯಲ್ಲಿ ಅಸುನೀಗಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಪ್ರಥಮ ಮಾಹಿತಿಯ ಪ್ರಕಾರ 11 ಗಂಟೆಯ ನಂತರ, ಆಂಡ್ರ್ಯೂ ಆಲಿಸ್ ರಿವರ್ ಬ್ರಿಡ್ಜ್ ಬಳಿಯ ಹರ್ವೆ ರೇಂಜ್ ರಸ್ತೆಯಲ್ಲಿ ಕಾರನ್ನು ಓಡಿಸುತ್ತಿದ್ದಾಗ ಅದು ರಸ್ತೆಮಾರ್ಗವನ್ನು ಬಿಟ್ಟು ಉರುಳಿತು ಎಂದು ಕ್ವೀನ್ಸ್‌ಲ್ಯಾಂಡ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಘಟನಾಸ್ಥಳಕ್ಕೆ ತುರ್ತು ಸೇವೆಗಳು ತೆರಳಿ ಆಂಡ್ರ್ಯೂ ಅವರನ್ನು ಬದುಕಿಸುವ ಪ್ರಯತ್ನಗಳು ಕೈಗೊಂಡರೂ ಅದು ಸಫಲವಾಗಲಿಲ್ಲ. ಗಾಯಗಳಿಂದಾಗಿ ಅವರು ಸಾವನ್ನಪ್ಪಿದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಘಟನೆಯ ಬಗ್ಗೆ ಫೊರೆನ್ಸಿಕ್ ಕ್ರ್ಯಾಶ್ ಯುನಿಟ್ ತನಿಖೆ ನಡೆಸುತ್ತಿದೆ.