ಆಫ್ಗನ್ ಮಾಜಿ ಅಧ್ಯಕ್ಷ ಘನಿಯನ್ನು ಭಾರತಕ್ಕೆ ಆಹ್ವಾನಿಸಿ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಅಮೆರಿಕ ಪಡೆ ಅಫ್ಗಾನಿಸ್ತಾನದಿಂದ ಹಂತ ಹಂತವಾಗಿ ಕಾಲ್ಕೀಳುತ್ತಿದ್ದಂತೆ ತಾಲಿಬಾನ್‌ ತನ್ನ ಪ್ರಭಾವನ್ನು ವೃದ್ಧಿಸಿಕೊಂಡಿದ್ದು, ತಾಲಿಬಾನ್‌ ಪಡೆ ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್‌ಅನ್ನು ವಶ ಪಡಿಸಿಕೊಂಡ ಬೆನ್ನಲ್ಲೇ ಅಶ್ರಫ್‌ ಘನಿ ದೇಶ ತೊರೆದು ಪಲಾಯನಗೈದಿದ್ದರು. ಇದೀಗ ಯುಎಇನಲ್ಲಿ ಅಶ್ರಫ್‌ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

ಇದೀಗ ಅಫ್ಗಾನುಸ್ತಾನದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ, ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್‌ ಘನಿ ಅವರನ್ನು ಭಾರತಕ್ಕೆ ಆಹ್ವಾನಿಸಬೇಕು ಎಂದು ಆಗ್ರಹಿಸಿದ್ದಾರೆ.

ಭಾರತದಲ್ಲಿ ನೆಲೆಸಲು ಅಶ್ರಫ್‌ ಘನಿ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದಿರುವ ಸುಬ್ರಮಣಿಯನ್‌ ಸ್ವಾಮಿ, ಇದರಿಂದ ಭಾರತದ ಭದ್ರತೆಗೆ ಅನುಕೂಲಕರವಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಅಫ್ಗಾನಿಸ್ತಾನದಲ್ಲಿ ವಲಸಿಗ ಸರ್ಕಾರ ರಚನೆಯಾಗಲಿದೆ. ಮುಂದೆ ಅಮೆರಿಕದ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ತಾಲಿಬಾನ್‌ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿದರೆ ಭಾರತಕ್ಕೆ ಅಶ್ರಫ್‌ ಘನಿ ಸಹಾಯ ಮಾಡುತ್ತಾರೆ ಎಂದು ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿದ್ದಾರೆ.