ರಾಜ್ಯದಲ್ಲಿ ಬರೋಬ್ಬರಿ 2.15. ಲಕ್ಷ ಎಕರೆ ಅರಣ್ಯ ಅತಿಕ್ರಮಣ, ಸದ್ಯ ತೆರವು ಗುರಿ 10,901 ಎಕರೆ, ನಿಗಧಿ ಮಾಡಿದ ಅರಣ್ಯ ಇಲಾಖೆ

ನವದೆಹಲಿ: ಕರ್ನಾಟಕದಲ್ಲಿ ಪ್ರಸ್ತುತ 2.15 ಲಕ್ಷ ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಅರಣ್ಯ ಸಂರಕ್ಷಣೆಯ ಪ್ರಮುಖ ಹೊಣೆ ಹೊತ್ತಿರುವ ಅರಣ್ಯಾಧಿಕಾರಿಗಳು ಈ ವರ್ಷ10,901 ಎಕರೆ ಅರಣ್ಯ ಅತಿಕ್ರಮಣ ತೆರವುಗೊಳಿಸಬೇಕು ಎಂದು ಅರಣ್ಯ ಇಲಾಖೆ ನಿರ್ದೇಶನ ನೀಡಿದೆ.

ರಾಜ್ಯದಲ್ಲಿ ತಾಪಮಾನ ಬದಲಾವಣೆಯ ಕ್ರಿಯಾಯೋಜನೆ ರೂಪಿಸಿ ಕಾರ್ಯಕ್ಷಮತೆ ಸೂಚಕಗಳನ್ನು ಕಳೆದ ವರ್ಷ ಅನುಮೋದಿಸಲಾಗಿದೆ. ಇದರಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸುವುದೇ ಪ್ರಮುಖ ಕಾರ್ಯಕ್ಷಮತೆ. ವರ್ಷಕ್ಕೆ 10 ಸಾವಿರ ಎಕರೆ ಅರಣ್ಯ ಅತಿಕ್ರಮಣ ತೆರವಿನ ಗುರಿ ನಿಗದಿಪಡಿಸಲಾಗಿದೆ.

ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಮಾರ್ಚ್‌ 19ರಂದು ನಿರ್ದೇಶನ ನೀಡಿದ್ದರು. ಅದಾದ ಬಳಿಕ, ಒತ್ತುವರಿ ತೆರವಿನ ಭೌತಿಕ ಗುರಿ ನಿಗದಿಪಡಿಸಿ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರವು 2015ರಲ್ಲಿ ಹೊರಡಿಸಿರುವ ಸುತ್ತೋಲೆಯನ್ನು ಗಮನದಲ್ಲಿಟ್ಟುಕೊಂಡು ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಸೂಚಿಸಿದ್ದಾರೆ. 2015ರ ಸುತ್ತೋಲೆ ಪ್ರಕಾರ, ಒತ್ತುವರಿ ಪ್ರಮಾಣ 3 ಎಕರೆಗಿಂತ ಕಡಿಮೆ ಇದ್ದರೆ ಅದನ್ನು ತೆರವುಗೊಳಿಸುವಂತಿಲ್ಲ.

‘ಅರಣ್ಯಗಳ ಒತ್ತುವರಿಯನ್ನು ಕಾಲಮಿತಿಯಲ್ಲಿ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ 2001ರಲ್ಲಿ ಆದೇಶಿಸಿದೆ. ಹೊಸ ಒತ್ತುವರಿಗೆ ಅನುವು ಮಾಡಿಕೊಡಬಾರದು ಎಂದು ಪರಿಸರ ಸಚಿವಾಲಯ 2022ರಲ್ಲಿ ಸೂಚಿಸಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ನೇತೃತ್ವದ ರಾಜ್ಯ ಮಟ್ಟದ ಸಮಿತಿ ರಚಿಸಬೇಕು. ಈ ಸಮಿತಿಯು ಆರು ತಿಂಗಳಿಗೊಮ್ಮೆ ಸಭೆ ಸೇರಿ ಪರಾಮರ್ಶೆ ನಡೆಸಬೇಕು. ಒತ್ತುವರಿ ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವಾಲಯ ತಾಕೀತು ಮಾಡಿದೆ. ಹೊಸದಾಗಿ ಅರಣ್ಯ ಒತ್ತುವರಿ ತಡೆಯಲು ವಿಫಲರಾದ ಡಿಸಿಎಫ್‌, ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪರಿಸರ ಸಚಿವಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಅರಣ್ಯ ಇಲಾಖೆಯವರು ಕಾಟಾಚಾರಕ್ಕೆ ತೆರವು ಕಾರ್ಯಾಚರಣೆ ನಡೆಸುತ್ತಾರೆ ಹಾಗೂ ಹೊಸ ಒತ್ತುವರಿ ತಡೆಗೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿ ಧಾರವಾಡ ನಿವಾಸಿ ಹಣಮಂತ ಎಂಬುವರು ಪರಿಸರ ಸಚಿವಾಲಯಕ್ಕೆ ಇತ್ತೀಚೆಗೆ ದೂರು ನೀಡಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸಚಿವಾಲಯ ಸೂಚಿಸಿತ್ತು.