ಅರಣ್ಯ ಇಲಾಖೆಯಲ್ಲಿ ಪದನ್ನೋತಿ ಹೊಂದದೆ ನಿವೃತ್ತಿ; ಬೇಸರದ ಸಂಗತಿ:ಪ್ರಕಾಶ್‌ ಎಸ್‌. ನೆಟಾಲ್ಕರ್‌

ಉಡುಪಿ: ಅರಣ್ಯ ಇಲಾಖೆಯಲ್ಲಿ ಪದೋನ್ನತಿ ಹೊಂದುವ ಅರ್ಹತೆ ಇದ್ದರೂ ಅವರಿಗೆ ಸರಿಯಾದ ಸಮಯಕ್ಕೆ ಪದೋನ್ನತಿ ಸಿಗದೆ ನಿವೃತ್ತಿ ಆಗುತ್ತಿದ್ದಾರೆ. ಇದು ತುಂಬಾ ಬೇಸರದ ಸಂಗತಿ ಆಗಿದೆ ಎಂದು ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ಎಸ್‌. ನೆಟಾಲ್ಕರ್‌ ಹೇಳಿದರು.

ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘದ ವತಿಯಿಂದ ಉಡುಪಿ ಕಿದಿಯೂರು ಹೊಟೇಲ್‌ನ ಮಾಧವ ಕೃಷ್ಣ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾನೂನು ಮಾಹಿತಿ ಕಾರ್ಯಾಗಾರ, ಹೊಸ ವರ್ಷದ ಡೈರಿ ಬಿಡುಗಡೆ, ನಿವೃತ್ತ ಅರಣ್ಯ ರಕ್ಷಕರು ಮತ್ತು ವೀಕ್ಷಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅರಣ್ಯ ರಕ್ಷಕರು ಹಾಗೂ ವೀಕ್ಷಕರು ತಮ್ಮ ಜೀವನದ ಹಂಗು ತೊರೆದು ಅರಣ್ಯ ಸಂರಕ್ಷಣೆಗೆ ಮಾಡುತ್ತಾರೆ. ದೀರ್ಘ ಕಾಲದಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪದೋನ್ನತಿ ಹೊಂದಬೇಕೆಂಬ ಆಸೆ ಸಹಜವಾಗಿಯೇ ಮೂಡುತ್ತದೆ. ಅದು ಕೆಲವರ ಬದುಕಿನ ಗುರಿಯೂ ಆಗಿರುತ್ತದೆ. ಆದರೆ ಅದಕ್ಕೆ ಸರ್ಕಾರದಿಂದ ಮನ್ನಣೆ ಸಿಗುತ್ತಿಲ್ಲ. ಹಾಗಾಗಿ ನಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸಬೇಕಾದರೆ ಮೊದಲು ನಾವು ಒಗ್ಗಟ್ಟಾಗಿರಬೇಕು. ನಮ್ಮ ಸಂಘದ ಬಲವರ್ಧನೆ ಆಗಬೇಕು ಎಂದರು.
ಅರಣ್ಯ ಇಲಾಖಾ ಸಿಬ್ಬಂದಿಗೆ ಕಾನೂನಿನ ಕೊರತೆ ಇದೆ. ಅರಣ್ಯ ಇಲಾಖೆಯ ಕಾನೂನು, ಕಾಯ್ದೆಗಳನ್ನು ಸರಿಯಾಗಿ ತಿಳಿದುಕೊಂಡು ಅನುಷ್ಠಾನ ಮಾಡಿದರೆ ಮಾತ್ರ ಅರಣ್ಯ ಸಂರಕ್ಷಣೆ ಮಾಡಲು ಸಾಧ್ಯವಿದೆ. ಅಲ್ಲದೆ ಕಾಡುಗಳ್ಳರಿಗೂ ಸರಿಯಾದ ಶಿಕ್ಷೆಯನ್ನು ನೀಡಬಹುದಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಗಣಪತಿ ನಾಯ್ಕ್‌ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಅಭಿಯೋಜಕಿ ಮಮ್ತಾಜ್‌ ವಿವಿಧ ಕಾನೂನುಗಳ ಅರಿವು ಮೂಡಿಸಿದರು. ರಾಜ್ಯಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್‌, ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘದ ಕಾರ್ಯದರ್ಶಿ ರಾಜ್‌ ಚೌಹಾಣ್‌, ಶಿವಮೊಗ್ಗ ಸಂಘದ ಅಧ್ಯಕ್ಷ ಶ್ರೀನಿವಾಸ ಉಪಸ್ಥಿತರಿದ್ದರು.

ಸಂಘದ ಗೌರವಾಧ್ಯಕ್ಷ ಎಚ್‌. ದೇವರಾಜ ಪಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಂ. ಕೇಶವ ಪೂಜಾರಿ ಸ್ವಾಗತಿಸಿದರು.