ರಾಜ್ಯದಲ್ಲಿ ಅರಣ್ಯ ವಿಸ್ತೀರ್ಣ ಪ್ರಮಾಣ ಹೆಚ್ಚಳ: ಡಿಎಫ್‌ಓ ಆಶೀಶ್ ರೆಡ್ಡಿ

ಉಡುಪಿ: ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ ಅರಣ್ಯ ವಿಸ್ತೀರ್ಣ ಪ್ರಮಾಣ ಹೆಚ್ಚಳವಾಗಿದ್ದು, ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ಪ್ರಮುಖವಾಗಿ ಅರಣ್ಯ ರಕ್ಷಕರು ಮತ್ತು ವೀಕ್ಷಕರ ದಕ್ಷ ಕಾರ್ಯನಿರ್ವಹಣೆಯಿಂದ ಇದು ಸಾಧ್ಯವಾಗಿದೆ ಎಂದು ಕುಂದಾಪುರ ವಿಭಾಗದ ಡಿಎಫ್ ಓ ಆಶೀಶ್ ರೆಡ್ಡಿ ಹೇಳಿದರು.

ಅವರು ಉಡುಪಿಯ ಐ.ಎಂ.ಎ ಭವನದಲ್ಲಿ, ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿ ಸಂಘ, ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಉಡುಪಿ  ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ನಡೆದ ಅರಣ್ಯ ಹುತಾತ್ಮರ ಸ್ಮರಣಾರ್ಥ ನಡೆದ 22 ನೇ ವರ್ಷದ ರಕ್ತದಾನ ಶಿಬಿರದಲ್ಲಿ ಸ್ವಯಂ ರಕ್ತದಾನ ಮಾಡಿ, ಶಿಬಿರ ಉದ್ಘಾಟಿಸಿ ಮಾತನಾಡಿದರು.

ಹಸಿರು ಉಳಿಸಿ, ಮಳೆಗಾಗಿ, ಸಮೃದ್ದಿಗಾಗಿ, ನೀರಿಗಾಗಿ, ಮುಂದಿನ ಪೀಳಿಗೆಗಾಗಿ ವನ ಉಳಿಸಿ ಎನ್ನುತ್ತೇವೆ. ಅರಣ್ಯ ರಕ್ಷಿಸಿ ಬೆಳಸುವಲ್ಲಿ ಅರಣ್ಯ ಇಲಾಖೆಯ ಅರಣ್ಯ ರಕ್ಷಕರು ಮತ್ತು ವೀಕ್ಷಕರ ಕಾರ್ಯವು ಅತ್ಯಂತ ಪ್ರಮುಖವಾಗಿದ್ದು, ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ ಅರಣ್ಯದ ವಿಸ್ತೀರ್ಣವು ಹೆಚ್ಚಾಗುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೂ ಸಹ ಅರಣ್ಯ ಮತ್ತು ಕಾಂಡ್ಲಾವನದ ವಿಸ್ತೀರ್ಣವು ಹೆಚ್ಚಾಗಿದ್ದು, ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟದ ಜೀವ ವೈವಿದ್ಯವನ್ನು ಉಳಿಸಿ, ಬೆಳೆಸುವುದರಲ್ಲಿ ಅರಣ್ಯ ಇಲಾಖೆ ಮಾತ್ರವಲ್ಲದೇ ಸಾರ್ವಜನಿಕರ ಭಾಗೀದಾರಿಕೆಯೂ ಅತ್ಯಗತ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ಅಧಿಕವಾಗುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಂತಹ ಸಂದರ್ಭಗಳಲ್ಲಿ ಒತ್ತಡಕ್ಕೆ ಒಳಗಾಗದೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಿ, ರಕ್ತದ ಒತ್ತಡ ಮತ್ತು ಹೃದಯಾಘಾತ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವೆಂದು ವೈಜ್ಞಾನಿಕವಾಗಿ ತಿಳಿದುಬಂದಿದ್ದು, ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಅರಣ್ಯ ಇಲಾಖೆ ಸಿಬ್ಬಂದಿಗಳು ಅರಣ್ಯ ರಕ್ಷಣೆಯ ಜೊತೆಯಲ್ಲಿ ರಕ್ತದಾನದ ಮೂಲಕ ಸಾರ್ವಜನಿಕರ ರಕ್ಷಣೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೇಶವ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 22 ರಕ್ತದಾನ ಶಿಬಿರಗಳನ್ನು ಆಯೋಜಿಸಿ 2000 ಯೂನಿಟ್ ಗೂ ಅಧಿಕ ರಕ್ತವನ್ನು ಸಿಬ್ಬಂದಿಗಳು ದಾನ ಮಾಡಿರುವುದು ಮಾತ್ರವಲ್ಲದೇ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಂದ ಬರುವ ದೂರವಾಣಿ ಕರೆಗಳಿಗೆ ಸ್ಪಂದಿಸಿ, ಆಸ್ಪತ್ರೆಗಳಿಗೆ ತೆರಳಿ ರೋಗಿಗಳಿಗೆ ರಕ್ತದಾನ ಮಾಡಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿ ಸಂಘ ಜಿಲ್ಲಾ ಅಧ್ಯಕ್ಷ ನಾಗೇಶ್ ಬಿಲ್ಲವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ ಉಡುಪ, ಐ.ಎಂ.ಎ ಅಧ್ಯಕ್ಷ ಡಾ. ವಿನಾಯಕ ಶೆಣೈ, ಮಂಗಳೂರು ಅರಣ್ಯ ಜಾಗೃತ ದಳದ ಅಧಿಕಾರಿ ಶ್ರೀಧರ್, ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್, ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ, ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ಗೌರವಾಧ್ಯಕ್ಷ ದೇವರಾಜ ಪಾಣ ಹೆಚ್, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ವೀರಣ್ಣ ಮಾಯಾಚಾರಿ ಸ್ವಾಗತಿಸಿದರು. ಉಪಾಧ್ಯಕ್ಷ ಕರುಣಾಕರ ಜೆ ಆಚಾರ್ಯ ವಂದಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ರಕ್ತದಾನ ನಡೆಯಿತು.