ನವದೆಹಲಿ: ಚಿರತೆಗಳ ಮೇಲಿನ ನಿಗಾಕ್ಕೆ ಇರುವ ಮಾನಿಟರಿಂಗ್ ಪ್ರೋಟೋಕಾಲ್ಗಳು, ರಕ್ಷಣೆಯ ಸ್ಥಿತಿಗಳು, ನಿರ್ವಹಣೆ, ಪಶುವೈದ್ಯಕೀಯ ಸೌಲಭ್ಯಗಳು, ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯ ಅಂಶಗಳ ಕುರಿತಂತೆ ರಾಷ್ಟ್ರೀಯ ತಜ್ಞರಿಂದ ಪ್ರಾಧಿಕಾರವು ಸಲಹೆಗಳನ್ನು ಪಡೆಯುತ್ತಿದೆ.ಮಧ್ಯಪ್ರದೇಶದ ಕುನೋ ಅರಣ್ಯಪ್ರದೇಶದಲ್ಲಿ ಬಿಡಲಾಗಿರುವ ಚೀತಾಗಳು ಒಂದರ ಹಿಂದೆ ಒಂದರಂತೆ ಪ್ರಾಣ ಕಳೆದುಕೊಳ್ಳುತ್ತಿದ್ದು, ಆತಂಕ ತಂದಿದೆ.ಚೀತಾಗಳು ಸಾವಿಗೆ ಕಾರಣ ಮತ್ತು ಪರಿಹಾರಕ್ಕಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಅಂತಾರಾಷ್ಟ್ರೀಯ ಚಿರತೆ ತಜ್ಞರ ಮೊರೆ ಹೋಗಿದೆ. ಇದರ ಕಾರಣ ಪತ್ತೆ ಹಚ್ಚಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಅಂತಾರಾಷ್ಟ್ರೀಯ ಚಿರತೆ ತಜ್ಞರು, ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ಪಶುವೈದ್ಯರನ್ನು ಸಂಪರ್ಕಿಸಿದೆ.
ಸಾವಿಗೆ ರೇಡಿಯೋ ಕಾಲರ್ ಕಾರಣವಲ್ಲ: ಇದು ಚೀತಾಗಳ ನಿರ್ವಹಣೆ ಹೊಣೆ ಹೊತ್ತಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ತಲೆನೋವು ತಂದಿದೆ. ವಿಶಿಷ್ಟ ತಳಿಯ ಚೀತಾಗಳ ರಕ್ಷಣೆಗಾಗಿ ಅಂತಾರಾಷ್ಟ್ರೀಯ ತಜ್ಞರ ಮೊರೆ ಹೋಗಿದೆ. ನೈಸರ್ಗಿಕ ಕಾರಣಗಳಿಂದ ಚೀತಾಗಳ ಸಾವಾಗಿದೆ. ಅವುಗಳ ಕೊರಳಿಗೆ ಹಾಕಿರುವ ರೇಡಿಯೋ ಕಾಲರ್ಗಳಿಂದಾಗಿ ಚೀತಾಗಳ ಸಾವು ಸಂಭವಿಸಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇದ್ಯಾವುದಕ್ಕೂ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಎನ್ಟಿಸಿಎ ಹೇಳಿದೆ.
ದೇಶದಲ್ಲಿ ನಶಿಸಿಹೋಗಿದ್ದ ಚೀತಾ ಸಂತತಿಯ ಮರುಸೃಷ್ಟಿಗೆ ಕೇಂದ್ರ ಸರ್ಕಾರ ‘ಪ್ರಾಜೆಕ್ಟ್ ಚೀತಾ’ ಯೋಜನೆ ಪರಿಚಯಿಸಿದ್ದು, ಅದರಂತೆ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಚೀತಾಗಳನ್ನು ದೇಶಕ್ಕೆ ತರಲಾಗಿದೆ. ಕ್ವಾರಂಟೈನ್ ನಡೆಸಿ ಬಳಿಕ ಅವುಗಳನ್ನು ಒಂದೊಂದಾಗಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಅರಣ್ಯಕ್ಕೆ ಬಿಡಲಾಗಿದೆ. ಸದ್ಯ 11 ಚೀತಾಗಳು ಅರಣ್ಯ ಸೇರಿವೆ. ಆದರೆ, ದುರಾದೃಷ್ಟವಶಾತ್ ಮರಿ ಸೇರಿದಂತೆ 5 ಚೀತಾಗಳು ಸಾವನ್ನಪ್ಪಿವೆ.
.
ದೀರ್ಘಾವಧಿಯಲ್ಲಿ ಯೋಜನೆ ಸಫಲ: ಪ್ರಾಜೆಕ್ಟ್ ಚೀತಾ ಇನ್ನೂ ಒಂದು ವರ್ಷ ಕೂಡ ಪೂರೈಸಿಲ್ಲ. ಚೀತಾ ಪರಿಚಯವು ದೀರ್ಘಾವಧಿಯ ಯೋಜನೆಯಾಗಿರುವುದರಿಂದ ಯಶಸ್ಸು ಅಥವಾ ವೈಫಲ್ಯದ ವಿಷಯದಲ್ಲಿ ಫಲಿತಾಂಶವನ್ನು ಈಗಲೇ ತೀರ್ಮಾನಿಸುವುದು ಅಕಾಲಿಕವಾಗಿದೆ. ಕಳೆದ 10 ತಿಂಗಳಲ್ಲಿ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರು ಚಿರತೆ ನಿರ್ವಹಣೆ, ಮೇಲ್ವಿಚಾರಣೆ ಮತ್ತು ರಕ್ಷಣೆಯಲ್ಲಿ ಮೌಲ್ಯಯುತವಾದ ಕಾರ್ಯವನ್ನು ಮಾಡಿದ್ದಾರೆ. ಯೋಜನೆಯು ದೀರ್ಘಾವಧಿಯಲ್ಲಿ ಯಶಸ್ವಿಯಾಗುತ್ತದೆ. ಈಗಲೇ ಯಾವ ನಿರ್ಧಾರಕ್ಕೆ ಬರಬಾರದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದರ ಜೊತೆಗೆ ರಕ್ಷಣೆ, ಪುನರ್ವಸತಿ, ಸಾಮರ್ಥ್ಯ ವೃದ್ಧಿ, ಸಕಲ ಸೌಲಭ್ಯ ಹೊಂದಿರುವ ಚಿರತೆ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಎನ್ಟಿಸಿಎ ಬೇಡಿಕೆ ಇಟ್ಟಿದೆ. ಚೀತಾಗಳ ಓಡಾಟಕ್ಕೆ ಹೆಚ್ಚುವರಿ ಅರಣ್ಯ ಪ್ರದೇಶವನ್ನು ಕುನೋ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ತರುವುದು, ಹೆಚ್ಚುವರಿ ಸಿಬ್ಬಂದಿ ನೇಮಕ, ಚಿರತೆ ರಕ್ಷಣಾ ಪಡೆ ಸ್ಥಾಪನೆ, ಮಧ್ಯಪ್ರದೇಶದ ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯದಲ್ಲಿ ಚಿರತೆಗಳಿಗೆ ಎರಡನೇ ಆವಾಸ ಸ್ಥಾನವನ್ನು ನಿರ್ಮಿಸಲು ಅದು ಯೋಜಿಸಿದೆ