ಪ್ರಾಕೃತಿಕ ವಿಕೋಪಗಳ ಮುನ್ಸೂಚನೆ ನೀಡಿ ಹೆಚ್ಚಿನ ಹಾನಿ ತಪ್ಪಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

ಉಡುಪಿ: ಮಳೆಯಿಂದಾಗುವ ಅತಿವೃಷ್ಟಿ ಸೇರಿದಂತೆ ನೈಸರ್ಗಿಕ ಪ್ರಾಕೃತಿಕ ವಿಕೋಪಗಳು ಉಂಟಾಗುವ ಮುನ್ಸೂಚನೆಗಳನ್ನು ಜನರಿಗೆ ಮುಂಚಿತವಾಗಿಯೇ ತಿಳಿಸಿ ಅವುಗಳನ್ನು ಎದುರಿಸುವ ಬಗ್ಗೆ ಅರಿವು ಮೂಡಿಸಿ, ಹಾನಿ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು.

ಸೋಮವಾರ ಜಿಲ್ಲಾಧಿಕಾರಿ ಸಂಕೀರ್ಣದ ವೀಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಾಗುವ ಯಾವುದೇ ರೀತಿಯ ನೈಸರ್ಗಿಕ ಅವಘಡಗಳು ಮತ್ತು ಅವುಗಳ ಅಡ್ಡ ಪರಿಣಾಮಗಳಿಗೆ ಸ್ಥಳೀಯ ಸಾರ್ವಜನಿಕರು ಒಳಗಾಗುತ್ತಾರೆ. ಸರ್ಕಾರದ ವಿವಿಧ ಇಲಾಖೆಗಳು ವಿಕೋಪಗಳ ಬಗ್ಗೆ ನೀಡುವ ಮುನ್ಸೂಚನೆಯ ಮಾಹಿತಿಗಳು ಸಕಾಲಕ್ಕೆ ತಲುಪಿಸುವುದರ ಜೊತೆಗೆ ಅವುಗಳನ್ನು ಎದುರಿಸುವ ಹಾಗೂ ಸುರಕ್ಷಿತವಾಗಿರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ ಜನರ ಜೀವನ, ಆಸ್ತಿ ಹಾಗೂ ಸಂಕಷ್ಟದ ನಷ್ಟವನ್ನು ಕಡಿಮೆಗೊಳಿಸಬೇಕು. ಪ್ರತಿಯೊಬ್ಬರ ಪ್ರಾಣವೂ ಅಮೂಲ್ಯವಾದುದು, ನೈಸರ್ಗಿಕ ವಿಕೋಪಗಳಿಂದಾಗಿ ಪ್ರಾಣ ಹಾನಿಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೈಸರ್ಗಿಕ ವಿಕೋಪಕ್ಕೆ ತ್ವರಿತವಾಗಿ ಸ್ಪಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದ ಅವರು ಗುಡುಗು-ಸಿಡಿಲಿನಿಂದಾಗುವ ಪ್ರಾಣ ಹಾನಿಯನ್ನು ತಪ್ಪಿಸಲು ಅವಶ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

ಗುಡುಗು ಸಿಡಿಲಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಸರ್ಕಾರವು ಸಿಡಿಲು ಆಪ್ ಅನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಸ್ಥಳೀಯ ವ್ಯಾಪ್ತಿಯಲ್ಲಿ ಗುಡುಗು ಸಿಡಿಲು ಹೊಡೆಯುವ ಬಗ್ಗೆ ನಿಖರ ಮಾಹಿತಿಯನ್ನು ಒದಗಿಸುತ್ತಿದೆ ಇದರ ಸದುಪಯೋಗ ಪಡೆದುಕೊಂಡು ತಮ್ಮ ರಕ್ಷಣೆಯನ್ನು ಮಾಡಬೇಕು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಕುಂದಾಪುರ ಡಿಎಫ್‌ಓ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ವೀಣಾ, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.