ರಾಜ್ಯದ ಎಲ್ಲ ಹೋಟೆಲ್‌ಗಳಲ್ಲೂ ಆಹಾರದ ಗುಣಮಟ್ಟ ಪರಿಶೀಲನೆ: ಸಚಿವ ಯು.ಟಿ. ಖಾದರ್

ಉಡುಪಿ: ಆಹಾರ ಸೇವನೆಯಲ್ಲಿ ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಪ್ರತಿಯೊಂದು ಹೋಟೆಲ್‌ನಲ್ಲಿಯೂ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ತಪಾಸಣಾ ಕಾರ್ಯವನ್ನು ಮೇಲ್ಮಟ್ಟದಿಂದಲೇ ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.

ಕಾಪುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಎಲ್ಲ ಪಂಚತಾರಾ ಹೋಟೆಲ್‌ಗಳಿಗೆ ನಮ್ಮ ತಂಡ ಈಗಾಗಲೇ ತೆರಳಿ ಪರಿಶೀಲನೆ ನಡೆಸಿದೆ. ಮುಂದಿನ ದಿನಗಳಲ್ಲಿ ಎಲ್ಲ ಹೋಟೆಲ್‌ಗಳಲ್ಲಿಯೂ ತಪಾಸಣೆ ನಡೆಯಲಿದೆ.

ಪಂಚತಾರಾ ಹೋಟೆಲ್‌ಗಳಲ್ಲಿಯೇ ಕ್ರಮ ಕೈಗೊಂಡರೆ, ಕೆಳಹಂತದ ಹೋಟೆಲ್‌ಗಳೂ ಎಚ್ಚೆತ್ತುಕೊಳ್ಳುತ್ತವೆ. ದೊಡ್ಡ ಹೋಟೆಲ್‌ಗಳನ್ನೇ ಬಿಡುತ್ತಿಲ್ಲ ಎಂದಾದರೆ ನಮ್ಮನ್ನೂ ಬಿಡುವುದಿಲ್ಲ ಎಂಬ ಭಾವನೆ ಅವರಲ್ಲಿ ಮೂಡಬೇಕು’ ಎಂದು ಹೇಳಿದರು.

ಸಣ್ಣ ಗೂಡಂಗಡಿ ಅಥವಾ ಅಂಗಡಿಗಳ ಮೇಲೆ ಮಾತ್ರ ತಪಾಸಣೆ ನಡೆಸುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ದೊರೆಯುವಂತೆ ಮಾಡುವುದು ಇಲಾಖೆಯ ಉದ್ದೇಶ ಎಂದು ಸಚಿವರು ತಿಳಿಸಿದರು.

ಕೆಎಫ್‌ಸಿ, ಮ್ಯಾಕ್‌ಡೊನಾಲ್ಡ್ಸ್ ಸೇರಿದಂತೆ ದೊಡ್ಡ ಆಹಾರ ಮಳಿಗೆಗಳಲ್ಲಿಯೂ ಆಹಾರದ ಮೂಲ ಮತ್ತು ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕು. ಚಿಕನ್‌ ಎಲ್ಲಿಂದ ಬರುತ್ತದೆ, ಎಷ್ಟು ದಿನ ಸಂಗ್ರಹಿಸಲಾಗುತ್ತದೆ, ಫ್ರೋಜನ್ ಆಹಾರವೇ, ಅದರಲ್ಲಿ ಬಣ್ಣ ಅಥವಾ ರಾಸಾಯನಿಕ ಬಳಸಲಾಗಿದೆಯೇ, ಬಣ್ಣವನ್ನು ಎಷ್ಟು ದಿನದಿಂದ ಸಂಗ್ರಹಿಸಲಾಗಿದೆ ಎಂಬುದನ್ನೂ ಪರಿಶೀಲಿಸಬೇಕು ಎಂದರು.

ಆಹಾರದಲ್ಲಿ ಬಳಸುವ ಪದಾರ್ಥಗಳ ಕುರಿತು ಗ್ರಾಹಕರಿಗೆ ಅಗತ್ಯ ಮಾಹಿತಿ ನೀಡುವ ಜವಾಬ್ದಾರಿ ಇಲಾಖೆಯದ್ದಾಗಿದೆ. ಮಾಹಿತಿ ಪಡೆದ ಬಳಿಕ ಆಹಾರ ಸೇವಿಸಬೇಕೇ ಬೇಡವೇ ಎಂಬುದನ್ನು ಜನರೇ ನಿರ್ಧರಿಸಬೇಕು. ‘ಜನರು ಅದನ್ನೇ ತಿನ್ನುತ್ತೇವೆ ಎಂದು ನಿರ್ಧರಿಸಿದರೆ, ನಾವು ಏನು ಮಾಡಲು ಸಾಧ್ಯವಿಲ್ಲ’ ಎಂದು ಯು.ಟಿ. ಖಾದರ್ ಹೇಳಿದರು.