ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಎಪಿಎಲ್ ಕಾರ್ಡ್ ವಿತರಣೆಗೆ ಮರುಚಾಲನೆ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ.
ಜೂನ್ ತಿಂಗಳಲ್ಲಿ ಹೊಸ ಕಾರ್ಡ್ಗಳಿಗೆ ಅರ್ಜಿ ಆಹ್ವಾನಿಸಲು ಇಲಾಖೆ ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೊಸ ಕಾರ್ಡ್ಗಾಗಿ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಕೆಯ ವೆಬ್ ಪೋರ್ಟಲ್ ಅನ್ನು ಸುಮಾರು ಒಂದೂವರೆ ವರ್ಷದಿಂದಲೂ ಸ್ಥಗಿತಗೊಳಿಸಲಾಗಿತ್ತು. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಜೂನ್ ಮೊದಲ ವಾರದಲ್ಲಿ ವೆಬ್ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಕೆಗೆ ಅನುವು ಮಾಡಿಕೊಡಲಾಗುವುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ವರದಿಗಳು ತಿಳಿಸಿವೆ.
ಕಳೆದ ವರ್ಷ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿತ್ತು. ಅದಕ್ಕೂ ಮೊದಲು ಚುನಾವಣಾ ತಯಾರಿಗಳನ್ನು ನಡೆಸಲಾಗುತ್ತಿತ್ತು. ಜೊತೆಗೆ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯೂ ಮುಗಿದಿತ್ತು. ಹೀಗಾಗಿ, ಸುಮಾರು ಒಂದೂವರೆ ವರ್ಷದಿಂದಲೂ ಎಪಿಎಲ್ ಕಾರ್ಡ್ಗೆ ಅರ್ಜಿಗಳನ್ನು ಸಲ್ಲಿಸಲು ಆನ್ಲೈನ್ ಪೋರ್ಟಲ್ನಲ್ಲಿ ಅವಕಾಶ ಕಲ್ಪಿಸಿರಲಿಲ್ಲ.
ಹೊಸದಾಗಿ ರಚನೆಯಾದ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತಿತರ ಯೋಜನೆಗಳನ್ನು ಜಾರಿಗೆ ತಂದಿತು. ಇವುಗಳ ಲಾಭ ಪಡೆಯಲು ಲಕ್ಷಾಂತರ ಜನ ಅರ್ಜಿ ಸಲ್ಲಿಸಲು ಕಾಯುತ್ತಿದ್ದರು. ಆದರೆ, ಯೋಜನೆಗೆ ಹೆಚ್ಚಿನ ಅರ್ಜಿಗಳು ಬಂದೇ ಬರುತ್ತವೆ ಎಂದು ಅರಿತ ಸರ್ಕಾರ, ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿರಲಿಲ್ಲ.
ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಜೂನ್ 5ರಿಂದ ಎಲ್ಲಾ ನಿರ್ಬಂಧಗಳು ತೆರವಾಗಲಿವೆ. ಆ ಬಳಿಕ ಕರ್ನಾಟಕದಲ್ಲಿ ಪಡಿತರ ಚೀಟಿ ಹಂಚಿಕೆ ಕಾರ್ಯ ನಡೆಯಲಿದೆ ಎಂದು ವರದಿಯಾಗಿದೆ.