ಪಬ್‌ಗಳ ಮೇಲೆ ಆಹಾರ ಇಲಾಖೆ ದಾಳಿ: ಫಂಗಸ್ ಹಿಡಿದ ಮಶ್ರೂಮ್‌, ಜಿರಳೆ ಪತ್ತೆ, ರಾಜ್ಯದ ಎಲ್ಲಾ ಹೊಟೇಲ್ ಗಳಿಗೂ ಎಚ್ಚರಿಕೆ!

ಬೆಂಗಳೂರು : ರಾಜಧಾನಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಹಾಗೂ ನೈಟ್‌ಲೈಫ್ ತಾಣಗಳಾದ ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನ ಪಬ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದೆ. ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 10 ತಂಡಗಳು ವಿವಿಧ ಹೋಟೆಲ್‌ಗಳು ಮತ್ತು ಪಬ್‌ಗಳಲ್ಲಿ ಆಹಾರ ಗುಣಮಟ್ಟ ಹಾಗೂ ಅಡುಗೆಮನೆಯ ಸ್ವಚ್ಛತೆಯನ್ನು ಪರಿಶೀಲಿಸಿವೆ. ರಾಜ್ಯಾದ್ಯಂತ ಆಹಾರ ಇಲಾಖೆ ಹೊಟೇಲ್ ಗಳೀಗೆ ಭೇಟಿ ನೀಡಲಿದೆ.

ಯುಬಿ ಸಿಟಿಯ ಸ್ಕೈ ಲಾಂಜ್ ಬಳಿಕ ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ನ ಹಲವು ಹೋಟೆಲ್‌ಗಳು ಮತ್ತು ಪಬ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಚರ್ಚ್ ಸ್ಟ್ರೀಟ್‌ನ ಪೆಗ್ ಆ್ಯಂಡ್ ಬಾಟಲ್ಸ್ ಪಬ್‌ನಲ್ಲಿ ಗಂಭೀರ ಅವ್ಯವಸ್ಥೆಗಳು ಪತ್ತೆಯಾಗಿವೆ.

ಎಕ್ಸ್‌ಪೈರ್‌ ಆದ ಆಹಾರ, ಫಂಗಸ್ ಹಿಡಿದ ಮಶ್ರೂಮ್!

ಪರಿಶೀಲನೆ ವೇಳೆ ಪಬ್‌ನ ಅಡುಗೆಮನೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಫಂಗಸ್ ಹಿಡಿದ ಮಶ್ರೂಮ್, ಅವಧಿ ಮೀರಿದ ಕ್ರೀಮ್, ಹಾಳಾದ ಮಶ್ರೂಮ್‌ಗಳು ಹಾಗೂ ಕಳಪೆ ಗುಣಮಟ್ಟದ ತರಕಾರಿಗಳು ಪತ್ತೆಯಾಗಿವೆ. ಬೇಬಿ ಕಾರ್ನ್ ಪ್ಯಾಕೆಟ್‌ಗಳಲ್ಲಿ ಕೀಟಗಳು ಕಂಡುಬಂದಿದ್ದು, ಫ್ರೀಜರ್‌ನಲ್ಲಿ ಕೊಳೆತು ನಾರುತ್ತಿದ್ದ ಆಹಾರ ಪದಾರ್ಥಗಳನ್ನು ರಾಶಿಗಟ್ಟಲೆ ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ.

ಇದಲ್ಲದೆ, ಚೀಸ್ ಪ್ಯಾಕೆಟ್‌ನಲ್ಲಿ ಸತ್ತ ಜಿರಳೆ ಪತ್ತೆಯಾಗಿದ್ದು, ಮಶ್ರೂಮ್‌ನಲ್ಲಿ ಫಂಗಸ್ ಕಾಣಿಸಿಕೊಂಡಿದೆ. ಚೈನೀಸ್ ಅಡುಗೆಗೆ ಬಳಸುವ ಕೆಲವು ತರಕಾರಿಗಳ ಗುಣಮಟ್ಟವೂ ಕಳಪೆಯಾಗಿರುವುದು ಅಧಿಕಾರಿಗಳ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

ಪಬ್‌ಗೆ ಬೀಗ; ಕಿಚನ್‌ಗೂ ಲಾಕ್

ಆಹಾರ ಇಲಾಖೆ ಅಧಿಕಾರಿಗಳು ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ, ಪಬ್‌ನ ಅಡುಗೆಮನೆಗೆ ಲಾಕ್ ಹಾಕಿದ್ದಾರೆ. ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಾಗೂ ಕಳಪೆ ಆಹಾರ ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ಪೆಗ್ ಆ್ಯಂಡ್ ಬಾಟಲ್ಸ್ ಪಬ್‌ಗೆ ನೋಟಿಸ್ ನೀಡಿ ಸೀಲ್ ಮಾಡಲಾಗಿದೆ.

ಎಫ್‌ಎಸ್‌ಎಸ್‌ಎ ಅಂಕಿತ ಅಧಿಕಾರಿ ಅನಿಲ್ ಧವನ್ ಮಾತನಾಡಿ, ಪೆಗ್ ಆ್ಯಂಡ್ ಬಾಟಲ್ಸ್ ಹಾಗೂ ಕೋಕಸ್ ಪಬ್‌ನಲ್ಲಿ ಪರಿಶೀಲನೆ ನಡೆಸಲಾಗಿದೆ. ಪೆಗ್ ಆ್ಯಂಡ್ ಬಾಟಲ್ಸ್‌ನಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಆಹಾರ ಪದಾರ್ಥಗಳಲ್ಲಿ ಜಿರಳೆ ಮತ್ತು ಕೀಟಗಳು ಪತ್ತೆಯಾಗಿವೆ. ಕೆಲವು ಆಹಾರ ಪದಾರ್ಥಗಳು ಅವಧಿ ಮೀರಿದ್ದವು. ಮಶ್ರೂಮ್‌ನಲ್ಲಿ ಫಂಗಸ್, ಪನ್ನೀರ್‌ನಲ್ಲಿ ಜಿರಳೆ ಹಾಗೂ ಅವಧಿ ಮೀರಿದ ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೆಗ್ ಆ್ಯಂಡ್ ಬಾಟಲ್ಸ್ ಪಬ್ ಅನ್ನು ಸೀಲ್ ಮಾಡಲಾಗಿದ್ದು, ಮತ್ತಷ್ಟು ಪರಿಶೀಲನೆಗಾಗಿ ಅಧಿಕಾರಿಗಳು ಮುಂದಿನ ದಿನ ಮತ್ತೆ ಭೇಟಿ ನೀಡಿ ಮಹಜರು ನಡೆಸಲಿದ್ದಾರೆ. ಕೋಕಸ್ ಪಬ್‌ಗೆ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂದುವರಿದ ಆಹಾರ ಇಲಾಖೆಯ ಕಾರ್ಯಾಚರಣೆ

ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಬೆಂಗಳೂರಿನ ಪ್ರಮುಖ ನೈಟ್‌ಲೈಫ್ ಹಾಗೂ ಆಹಾರ ಕೇಂದ್ರಗಳಾಗಿದ್ದು, ಪ್ರತಿದಿನ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಸುರಕ್ಷತೆ ಹಾಗೂ ಸ್ವಚ್ಛತೆ ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ.

ಆಹಾರ ಇಲಾಖೆ ಅಧಿಕಾರಿಗಳು ಇತರ ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲೂ ಪರಿಶೀಲನೆ ಮುಂದುವರಿಸಿದ್ದಾರೆ. ಅಡುಗೆಮನೆಯಲ್ಲಿ ಸ್ವಚ್ಛತೆ ಕಾಪಾಡದಿರುವುದು, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸುವುದು ಹಾಗೂ ಕೀಟಗಳು, ಜಿರಳೆಗಳಂತಹ ಅಶುದ್ಧತೆಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪರಿಶೀಲನೆ ವೇಳೆ ಸಂಗ್ರಹಿಸಿರುವ ಆಹಾರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದ್ದು, ಪರೀಕ್ಷಾ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ. ಮುಂದಿನ ದಿನಗಳಲ್ಲೂ ನಗರದ ವಿವಿಧ ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ಹಾಗೂ ಪರಿಶೀಲನೆ ಮುಂದುವರಿಯಲಿದೆ.