ನವದೆಹಲಿ: ಬೀದಿ ಬದಿ ಅಂಗಡಿಗಳಲ್ಲಿ ಬಜ್ಜಿ, ಬೋಂಡಾ, ಚುರುಮುರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಾಮಾನ್ಯವಾಗಿ ದಿನಪತ್ರಿಕೆಗಳಲ್ಲಿ ಪೊಟ್ಟಣ ಮಾಡಿ ನೀಡಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾಗದದ ಬಳಕೆ ಉತ್ತಮವೆಂದು ಪರಿಗಣಿಸಲಾದರೂ, ಆಹಾರವನ್ನು ದಿನಪತ್ರಿಕೆಗಳಲ್ಲಿ ಸುತ್ತುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಚ್ಚರಿಕೆ ನೀಡಿದೆ.
ಆಹಾರ ಪದಾರ್ಥಗಳ ಪ್ಯಾಕಿಂಗ್ಗಾಗಿ ದಿನಪತ್ರಿಕೆಗಳನ್ನು ಬಳಸಬಾರದು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ಆದರೆ ಮುಂಬೈನಲ್ಲಿ ವಡಾ ಪಾವ್ ಸೇರಿದಂತೆ ವಿವಿಧ ಆಹಾರಗಳನ್ನು ಪತ್ರಿಕೆಗಳಲ್ಲಿ ನೀಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಎಫ್ಎಸ್ಎಸ್ಎಐ ಈ ನಿಯಮವನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.

ಬಳಸಿದ್ರೆ ಏನಾಗುತ್ತದೆ?
ಪ್ರಾಧಿಕಾರದ ಪ್ರಕಾರ, ಪತ್ರಿಕೆ ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ವಿಷಕಾರಿ ರಾಸಾಯನಿಕಗಳು ಹಾಗೂ ಸೀಸದಂತಹ ಭಾರ ಲೋಹಗಳು ಇರಬಹುದು. ಬಿಸಿ ಅಥವಾ ಎಣ್ಣೆಯುಕ್ತ ಆಹಾರವು ಈ ಶಾಯಿಯ ಸಂಪರ್ಕಕ್ಕೆ ಬಂದಾಗ ರಾಸಾಯನಿಕಗಳು ಆಹಾರದಲ್ಲಿ ಬೆರೆತು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.
ಇದಲ್ಲದೆ, ಹಳೆಯ ದಿನಪತ್ರಿಕೆಗಳಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಧೂಳಿನ ಕಣಗಳು ಇರಬಹುದಾಗಿದೆ. ಇಂತಹ ಕಾಗದಗಳಲ್ಲಿ ಆಹಾರ ಸೇವಿಸುವುದು ದೀರ್ಘಕಾಲದಲ್ಲಿ ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಪರ್ಯಾಯ ಆಯ್ಕೆಗಳೇನು?
ಆಹಾರವನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಲು ಬಟರ್ ಪೇಪರ್, ಬಾಳೆ ಎಲೆ, ಸ್ಟೀಲ್ ಪಾತ್ರೆಗಳು, ಅಡಿಕೆ ಹಾಳೆಯ ತಟ್ಟೆ ಅಥವಾ ದೊನ್ನೆ ಹಾಗೂ ಜೇನುಮೇಣ ಲೇಪಿತ ಹತ್ತಿ ಬಟ್ಟೆಗಳನ್ನು ಬಳಸುವುದು ಉತ್ತಮ ಪರ್ಯಾಯಗಳಾಗಿವೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

















