ನವದೆಹಲಿ: ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಆರೋಗ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಐದು ಉತ್ಪಾದಕ ಕಂಪನಿಗಳ ಪರವಾನಗಿಯನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
ಪ್ಯಾಕೇಜ್ಡ್ ಕುಡಿಯುವ ನೀರಿನ ಪ್ರಮುಖ ಕಂಪನಿ ಬಿಸ್ಲೆರಿ ಸೇರಿದಂತೆ ಆರು ಆಹಾರ ಉದ್ಯಮ ನಿರ್ವಾಹಕರ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ. ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಯಾವ ಕಂಪನಿಗಳ ಪರವಾನಗಿ ಅಮಾನತು?
ವೇದಾಂತ್ ರೆಮಿಡೀಸ್, ಲುಸಿಡ್ ಹೆಲ್ತ್ಕೇರ್, ಅಂಬಿಕೊ ಆಯುರ್ವೇದಿಕ್ ಹೆಲ್ತ್ಕೇರ್, ವಿಟಾಮೆಡಿಕ್ ಹೆಲ್ತ್ ನ್ಯೂಟ್ರಾಸ್ಯುಟಿಕಲ್ಸ್ ಮತ್ತು ಅಡೋರಿಯಲ್ ಹೆಲ್ತ್ಕೇರ್ ಕಂಪನಿಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.
ಪ್ರಾಧಿಕಾರದ ತಪಾಸಣೆ ವೇಳೆ ಉತ್ಪಾದನಾ ಘಟಕಗಳಲ್ಲಿ ಅನೈರ್ಮಲ್ಯ, ಕೀಟ ನಿಯಂತ್ರಣ ವ್ಯವಸ್ಥೆಯ ಕೊರತೆ, ಅವಧಿ ಮೀರಿದ ಪದಾರ್ಥಗಳ ಬಳಕೆ, ಕಡ್ಡಾಯ ದಾಖಲೆಗಳ ನಿರ್ವಹಣೆಯಲ್ಲಿ ವೈಫಲ್ಯ ಹಾಗೂ ಪರವಾನಗಿಯಲ್ಲಿ ನಮೂದಿಸಿರುವ ಸ್ಥಳಕ್ಕೂ ವಾಸ್ತವಿಕ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೂ ವ್ಯತ್ಯಾಸವಿರುವುದು ಸೇರಿದಂತೆ ಹಲವು ಗಂಭೀರ ಲೋಪಗಳು ಪತ್ತೆಯಾಗಿವೆ.
ಏನಿದು ನ್ಯೂಟ್ರಾಸ್ಯುಟಿಕಲ್ಸ್?
ನ್ಯೂಟ್ರಿಷನ್ (ಪೌಷ್ಟಿಕಾಂಶ) ಮತ್ತು ಫಾರ್ಮಾಸ್ಯುಟಿಕಲ್ಸ್ (ಔಷಧ) ಪದಗಳ ಸಂಯೋಜನೆಯೇ ನ್ಯೂಟ್ರಾಸ್ಯುಟಿಕಲ್ಸ್. ಇವು ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶ ಒದಗಿಸುವ ಹಾಗೂ ನಿರ್ದಿಷ್ಟ ಆರೋಗ್ಯ ಪ್ರಯೋಜನಗಳನ್ನು ನೀಡುವ ಆಹಾರ ಉತ್ಪನ್ನಗಳಾಗಿವೆ. ಪೂರಕ ಸಾರಗಳು, ಶುದ್ಧೀಕರಿಸಿದ ಸಂಯುಕ್ತಗಳು ಮತ್ತು ಇತರ ಪೌಷ್ಟಿಕಾಂಶಯುಕ್ತ ಪದಾರ್ಥಗಳನ್ನು ಇವು ಒಳಗೊಂಡಿರುತ್ತವೆ. ಸಾಮಾನ್ಯ ಆಹಾರಕ್ಕಿಂತ ಭಿನ್ನವಾಗಿ, ನಿರ್ದಿಷ್ಟ ಆರೋಗ್ಯ ಪ್ರಯೋಜನಗಳ ಉದ್ದೇಶದಿಂದ ಇವುಗಳನ್ನು ಮಾರುಕಟ್ಟೆ ಮಾಡಲಾಗುತ್ತದೆ. ಇಂತಹ ಉತ್ಪನ್ನಗಳು ಎಫ್ಎಸ್ಎಸ್ಎಐ ನಿಯಂತ್ರಣಕ್ಕೆ ಒಳಪಡುತ್ತವೆ.
ಕಂಪನಿವಾರು ಪತ್ತೆಯಾದ ಲೋಪಗಳೇನು?
ವೇದಾಂತ್ ರೆಮಿಡೀಸ್: ಐದು ಕಂಪನಿಗಳ ಪೈಕಿ ಅತ್ಯಂತ ಕಳಪೆ ಸಾಧನೆ ದಾಖಲಿಸಿರುವ ಈ ಸಂಸ್ಥೆ ಕೇವಲ ಶೇ.12ರಷ್ಟು ಅನುಸರಣಾ ಅಂಕ ಪಡೆದಿದೆ. ಘಟಕದಲ್ಲಿ ತೀವ್ರ ಅನೈರ್ಮಲ್ಯ, ಅಸಮರ್ಪಕ ಕೀಟ ನಿಯಂತ್ರಣ ಹಾಗೂ ಅವಧಿ ಮೀರಿದ ಸುವಾಸನೆಯ ಪದಾರ್ಥಗಳು ಪತ್ತೆಯಾಗಿವೆ. ಪರವಾನಗಿ ಪಡೆದ ಮತ್ತು ಪಡೆಯದ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸದೆ ಒಟ್ಟಿಗೆ ಇರಿಸಲಾಗಿತ್ತು. ಕೆಲವು ಉತ್ಪನ್ನಗಳನ್ನು ಪರವಾನಗಿ ಇಲ್ಲದೆಯೇ ತಯಾರಿಸಲಾಗುತ್ತಿತ್ತು. ಸುಧಾರಣಾ ನೋಟಿಸ್ಗೆ ಸಂಸ್ಥೆ ಉತ್ತರ ನೀಡಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ.
ಲುಸಿಡ್ ಹೆಲ್ತ್ಕೇರ್: ಘಟಕದಲ್ಲಿ ನೈರ್ಮಲ್ಯ ನಿರ್ವಹಣೆ, ಕೀಟ ನಿಯಂತ್ರಣ ಹಾಗೂ ಆಯುರ್ವೇದ ಮತ್ತು ಪೌಷ್ಟಿಕ ಉತ್ಪನ್ನಗಳ ಪ್ರತ್ಯೇಕತೆಯಲ್ಲಿ ಲೋಪಗಳು ಕಂಡುಬಂದಿವೆ. ಆಹಾರ ಸುರಕ್ಷತೆ, ಪರೀಕ್ಷೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಕಡ್ಡಾಯ ದಾಖಲೆಗಳನ್ನೂ ಸರಿಯಾಗಿ ನಿರ್ವಹಿಸಿರಲಿಲ್ಲ. ಸಿಬ್ಬಂದಿಗೆ ಅಗತ್ಯ ನೈರ್ಮಲ್ಯ ಸೌಲಭ್ಯ ಹಾಗೂ ತರಬೇತಿಯ ಕೊರತೆಯೂ ಕಂಡುಬಂದಿದ್ದು, ಸಂಸ್ಥೆ ಶೇ.27ರಷ್ಟು ಅನುಸರಣಾ ಅಂಕ ಪಡೆದಿದೆ.
ಅಂಬಿಕೊ ಆಯುರ್ವೇದಿಕ್ ಹೆಲ್ತ್ಕೇರ್: ಸಂಸ್ಥೆಯ ಆವರಣದಲ್ಲಿ ಅವಧಿ ಮೀರಿದ ಪದಾರ್ಥಗಳನ್ನು ಸಂಗ್ರಹಿಸಿಡಲಾಗಿತ್ತು. ಅನೈರ್ಮಲ್ಯದ ವಾತಾವರಣದಲ್ಲಿ ಉತ್ಪಾದನಾ ಚಟುವಟಿಕೆ ನಡೆಯುತ್ತಿತ್ತು. ಆಯುರ್ವೇದ ಮತ್ತು ಆಹಾರ ಉತ್ಪನ್ನಗಳನ್ನು ಪ್ರತ್ಯೇಕವಾಗಿ ಇರಿಸದಿರುವುದು ಹಾಗೂ ಕಡ್ಡಾಯ ಸುರಕ್ಷತಾ ಮತ್ತು ಪರೀಕ್ಷಾ ದಾಖಲೆಗಳ ಕೊರತೆ ಪತ್ತೆಯಾಗಿದೆ. ಸಂಸ್ಥೆ ಶೇ.46ರಷ್ಟು ಅನುಸರಣಾ ಅಂಕ ಪಡೆದಿದೆ.
ವಿಟಾಮೆಡಿಕ್ ಹೆಲ್ತ್ ನ್ಯೂಟ್ರಾಸ್ಯುಟಿಕಲ್ಸ್: ಪರವಾನಗಿಯಲ್ಲಿ ನಮೂದಿಸಿರುವ ಉತ್ಪಾದನಾ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಪರವಾನಗಿಯಲ್ಲಿ ಅನುಮೋದಿಸದ ಬೇರೆ ವಿಳಾಸದಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವ ಆರೋಪವಿದೆ. ಈ ಘಟಕವು ಮಾಂಸ ಸಂಸ್ಕರಣಾ ಘಟಕದೊಂದಿಗೆ ಆವರಣವನ್ನು ಹಂಚಿಕೊಂಡಿರುವುದು ಕೂಡ ನಿಯಂತ್ರಕರ ಆತಂಕಕ್ಕೆ ಕಾರಣವಾಗಿದೆ.
ಅಡೋರಿಯಲ್ ಹೆಲ್ತ್ಕೇರ್: ಸಂಸ್ಥೆಯ ಪರವಾನಗಿಯಲ್ಲಿ ನಮೂದಿಸಿರುವ ಸ್ಥಳದ ಅಸ್ತಿತ್ವ ಮತ್ತು ಮಾಲೀಕತ್ವದ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿವೆ. ಪರವಾನಗಿ ಪಡೆದ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಕಂಪನಿಯ ಕಾರ್ಯಾಚರಣೆ ಇರಲಿಲ್ಲ. ಪ್ರಸ್ತುತ ಸ್ಥಳದ ಮಾಲೀಕರು ಕಂಪನಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಅಸ್ತಿತ್ವದಲ್ಲಿಲ್ಲದ ಸ್ಥಳಕ್ಕೆ ಸಕ್ರಿಯ ಪರವಾನಗಿ ಹೊಂದಿರುವ ಮೂಲಕ ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಎಫ್ಎಸ್ಎಸ್ಎಐ ತಿಳಿಸಿದೆ.















