ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ‘ಗೋವಿಗಾಗಿ ಮೇವು ಅಭಿಯಾನ’ದಡಿ ಎರಡು ಲೋಡ್ ಹಸಿ ಹುಲ್ಲು ಸಂಗ್ರಹಿಸಿ ಇಂದು ನೀಲಾವರ ಗೋಶಾಲೆಗೆ ಹಸ್ತಾಂತರ ಮಾಡಲಾಯಿತು.
ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಅವರ ನೇತೃತ್ವದಲ್ಲಿ ಗೋವುಗಳಿಗೆ ಮೇವು ಸಂಗ್ರಹಿಸಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಲಾಯಿತು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಪೇಜಾವರ ಶ್ರೀಪಾದರ ಆಶೀರ್ವಾದೊಂದಿಗೆ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು , ಮುಂದಿನ ದಿನಗಳಲ್ಲಿ ಬಿಜೆಪಿಯ ಎಲ್ಲಾ ಮೋರ್ಚಾಗಳಿಗೆ ಪ್ರತಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ಮೇವನ್ನು ನೀಡಲು ಸೂಚಿಸಲಾಗಿದೆ. ಕೆಲ ದಿನಗಳ ಹಿಂದೆ ಬಿಲ್ಲಾಡಿ ಪೃಥ್ವಿರಾಜ್ ಶೆಟ್ಟಿ ಹಾಗೂ ಕೆಲ ಯುವಕರಿಂದ ಆರಂಭಗೊಂಡ ಈ ಅಭಿಯಾನ ರಾಜ್ಯ ವ್ಯಾಪಿ ಹರಡಲಿ ಎಂದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯ 6 ಮಂಡಲದ ಮಹಿಳಾ ಮೋರ್ಚಾಗಳಿಗೆ ಅಭಿಯಾನದಲ್ಲಿ ಕೈಜೋಡಿಸಲು ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ನಳಿನಿ ಪ್ರದೀಪ್, ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಪ್ರಮೀಳಾ ಹರೀಶ್, ಉಪಾಧ್ಯಕ್ಷೆ ರಮಾಶೆಟ್ಟಿ, ಕಾರ್ಯದರ್ಶಿಗಳಾದ ವಿದ್ಯಾ ಪೈ, ಅಶ್ವಿನಿ, ನೀರಜಾ ಶೆಟ್ಟಿ, ಜುಬೇದಾ, ಸ್ನೇಹಾ ಅಲೆವೂರು, ನಗರಸಭಾ ಸದಸ್ಯರಾದ ರಜನಿ ಹೆಬ್ಬಾರ್, ಮಹಿಳಾ ಬಿಜೆಪಿ ಉಡುಪಿ ಗ್ರಾಮಾಂತರ ಅಧ್ಯಕ್ಷೆ ವಸಂತಿ ಸತೀಶ್ ಪೂಜಾರಿ, ಕಾರ್ಯದರ್ಶಿ ಶೋಭಾ, ಸತೀಶ್ ಪೂಜಾರಿ ಉದ್ಯಾವರ, ನಿಶ್ಚಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು












