ಅಂಬಲಪಾಡಿ ಮಹಾಕಾಳಿ ಸನ್ನಿಧಿಯಲ್ಲಿ ಪುಷ್ಪ ವೈಭವ: ಭಕ್ತರನ್ನು ಸೆಳೆದ ಚಿಕ್ಕಬಳ್ಳಾಪುರದ ಭಕ್ತರ ಸೇವೆ

ಉಡುಪಿ: ಜಿಲ್ಲೆಯ ಪ್ರಸಿದ್ಧ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪುಷ್ಪಾಲಂಕಾರ ನೆರವೇರಿದ್ದು, ದೇವಾಲಯವು ವರ್ಣರಂಜಿತ ಹೂವಿನ ಅಲಂಕಾರದಿಂದ ಕಂಗೊಳಿಸಿತು.

ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬಗೆಯ ಹೂವುಗಳಿಂದ ದೇವಾಲಯದ ಒಳಾಂಗಣ ಹಾಗೂ ಹೊರಾಂಗಣವನ್ನು ಅಲಂಕರಿಸಲಾಗಿದ್ದು, ಸಾವಿರಾರು ಭಕ್ತರ ಗಮನ ಸೆಳೆಯಿತು.

ಚಿಕ್ಕಬಳ್ಳಾಪುರದ ಭಕ್ತವೃಂದವು ಹಲವು ವರ್ಷಗಳಿಂದ ಪ್ರತಿವರ್ಷ ಭಕ್ತಿಭಾವದಿಂದ ಈ ವಿಶೇಷ ಪುಷ್ಪಾಲಂಕಾರ ಸೇವೆಯನ್ನು ಸಲ್ಲಿಸುತ್ತಿದ್ದು, ಈ ಬಾರಿಯೂ ತಮ್ಮ ಕೈಯಾರೆ ದೇವಾಲಯವನ್ನು ಅಲಂಕರಿಸಿದರು.

ದೇವಿಯ ಅನುಗ್ರಹದಿಂದ ತಮ್ಮ ಬದುಕಿನಲ್ಲಿ ಶುಭ ಬದಲಾವಣೆಗಳಾಗಿವೆ ಎಂಬ ನಂಬಿಕೆಯಿಂದ ಈ ಸೇವೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ದೇವಾಲಯದ ಗೋಪುರ, ಪ್ರವೇಶ ದ್ವಾರ, ಕಂಬಗಳು, ಗೋಡೆಗಳು ಹಾಗೂ ಗರ್ಭಗುಡಿಯ ಸುತ್ತಮುತ್ತಲಿನ ಪ್ರದೇಶವನ್ನು ವಿವಿಧ ಬಣ್ಣಗಳ ಸುಗಂಧಭರಿತ ಹೂವುಗಳಿಂದ ಅಲಂಕರಿಸಲಾಗಿತ್ತು.

ಶುಕ್ರವಾರ ಮಹಾಕಾಳಿ ದೇವಿಯ ಆರಾಧನೆಗೆ ವಿಶೇಷ ಮಹತ್ವವಿರುವ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ಜನಾರ್ಧನ ಸ್ವಾಮಿ ಹಾಗೂ ಶ್ರೀ ಮಹಾಕಾಳಿಯ ದರ್ಶನ ಪಡೆದರು.

ಬಳಿಕ ವಿಶೇಷ ಪುಷ್ಪಾಲಂಕಾರವನ್ನು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಅನೇಕ ಭಕ್ತರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಂಭ್ರಮಿಸಿದರು.

ಭಕ್ತಿಯ ಪ್ರತೀಕವಾಗಿ ಸಲ್ಲಿಸಲಾದ ಈ ವಿಶೇಷ ಪುಷ್ಪಾಲಂಕಾರ ಸೇವೆಯು ದೇವಾಲಯದ ಧಾರ್ಮಿಕ ವೈಭವವನ್ನು ಮತ್ತಷ್ಟು ಹೆಚ್ಚಿಸಿದ್ದು, ಅಂಬಲಪಾಡಿ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.