ಸುರಕ್ಷಿತವಾಗಿದೆ ತೇಲುವ ಸೇತುವೆ: ವಂದತಿಗಳಿಗೆ ಕಿವಿಗೊಡಬೇಡಿ; ಮಲ್ಪೆ ಬೀಚ್ ಗುತ್ತಿಗೆದಾರ ಹೇಳಿಕೆ

ಮಲ್ಪೆ: ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಉಂಟಾಗಿರುವ ಅಲೆಗಳ ಅಬ್ಬರದಿಂದಾಗಿ ಮುಂಜಾಗೃತಾ ಕ್ರಮವಾಗಿ ಮಲ್ಪೆ ಬೀಚ್‍ನಲ್ಲಿ ನೂತನವಾಗಿ ಆರಂಭಗೊಂಡಿರುವ ತೇಲುವ ಸೇತುವೆ ಸೇರಿದಂತೆ ಜಲ ಕ್ರೀಡೆಗಳನ್ನು ಮೂರು ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

ಮಲ್ಪೆ ಬೀಚ್ ನಲ್ಲಿ ಇತ್ತೀಚೆಗೆ ಅರಂಭಗೊಂಡಿರುವ ತೇಲುವ ಸೇತುವ (ಫ್ಲೋಟಿಂಗ್ ಬ್ರಿಡ್ಜ್) ನ ಕುರಿತಾಗಿ ಹಬ್ಬಿರು ವದಂತಿಗಳಿಗೆ ಸ್ಪಷ್ಟನೆ ನೀಡಿ ಪ್ರತಿಕ್ರಿಯೆ ನೀಡಿದ ಅವರು, ಈ ಸೇತುವೆಯಲ್ಲಿ ಸುರಕ್ಷತೆಯ ದೃಷ್ಠಿಯಿಂದ ಸೆಂಟರ್ ಲಾಕ್ ವ್ಯವಸ್ಥೆಯನ್ನು ತೆಗೆದಿಡಲಾಗಿದೆ. ಇದರಿಂದಾಗಿ ಸೇತುವೆಯ ಕೆಲವು ಬ್ಲಾಕ್‍ಗಳು ಸಮುದ್ರದಲ್ಲಿ ತೇಲುತ್ತಿದ್ದವು. ಆದರೆ ಜನರು ಇದನ್ನು ತಪ್ಪಾಗಿ ಗ್ರಹಿಸಿಕೊಂಡು ವಂದತಿಗಳನ್ನು ಹಬ್ಬಿಸುತ್ತಿದ್ದಾರೆ.

ಸೇತುವೆ ತುಂಡಾಗಿದೆ, ಸುರಕ್ಷಿತವಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಸೇತುವೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಯಾವುದೇ ತೊಂದರೆಗಳು ಆಗಿಲ್ಲ. ತೇಲುವ ಸೇತುವೆಗೂ ಯಾವುದೇ ಹಾನಿಯಾಗಿಲ್ಲ. ಅಲ್ಲದೆ ತೇಲುವ ಸೇತುವೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪ್ರವಾಸಿಗರು ಹಾಗೂ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿ ಕೊಡಬಾರದು. ಸೈಕ್ಲೋನ್ ಪ್ರಭಾವ ಕಡಿಮೆ ಆದ ಬಳಿಕ ಮತ್ತೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.