ಮಲ್ಪೆ ಕಡಲ ತೀರದ ತೇಲುವ ಸೇತುವೆ ಪ್ರವಾಸಿಗರಿಗೆ ಮುಕ್ತ

ಮಲ್ಪೆ: ಇಲ್ಲಿನ ಕಡಲತೀರದಲ್ಲಿ ರಾಜ್ಯದ ಪ್ರಪ್ರಥಮ ತೇಲುವ ಸೇತುವೆಯನ್ನು ಶಾಸಕ ರಘುಪತಿ ಭಟ್ ಭಾನುವಾರದಂದು ಮತ್ತೊಮ್ಮೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಘುಪತಿ ಭಟ್ ಈ ರೀತಿಯ ಸೇತುವೆ ಕೇರಳದಲ್ಲಿ ಮಾತ್ರವಿದ್ದು, ಇದೀಗ ಕರ್ನಾಟಕದ ಮಲ್ಪೆಯೂ ತೇಲುವ ಸೇತುವೆಯನ್ನು ಹೊಂದಲಿದೆ. ಇದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಲಿದೆ ಎಂದರು.

ಈ ವರ್ಷದ ಮೇ ತಿಂಗಳಲ್ಲಿ ಸೇತುವೆ ಉದ್ಘಾಟನೆಯಾಗಿದ್ದರೂ ಎರಡೇ ದಿನಗಳಲ್ಲಿ ಮುರಿದು ಬಿದ್ದು ಮಳೆಗಾಲದ ಹಿನ್ನೆಲೆಯಲ್ಲಿ ಕಳಚಿ ಇಡಲಾಗಿತ್ತು. ಆದರೆ ಈ ಬಾರಿ ಕೇರಳ ಮತ್ತು ಕರ್ನಾಟಕದ ತಜ್ಞರ ತಂಡ ಬೀಚ್‌ಗೆ ಭೇಟಿ ನೀಡಿ ಹೊಸ ತೂಗು ಸೇತುವೆಯ ಸಾಮರ್ಥ್ಯ ಮತ್ತು ಶಕ್ತಿಯನ್ನು ಪರಿಶೀಲಿಸಿದೆ. ಸೇತುವೆಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುತ್ತದೆ ಎನ್ನಲಾಗಿರುವುದರಿಂದ ಭಾನುವಾರದಿಂದ ಪ್ರವಾಸಿಗರಿಗಾಗಿ ಸೇತುವೆಯನ್ನು ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ.

ಉದ್ಘಾಟನೆಯ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಎಸ್ಪಿ ಅಕ್ಷಯ್ ಹಾಕೆ, ಗುತ್ತಿಗೆ ಸಂಸ್ಥೆಯ ಪಾಲುದಾರರಾದ ಶೇಖರ್ ಪುತ್ರನ್, ಧನಂಜಯ್ ಕಾಂಚನ್ ಮತ್ತು ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು.

ಮುಂಬೈನ ಎಚ್‌ಎನ್ ಮೆರೈನ್ ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟಿರುವ ಈ ಸೇತುವೆಯು 120 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿದೆ ಹಾಗೂ ಎರಡೂ ಬದಿಗಳಲ್ಲಿ ಸುರಕ್ಷಾ ವ್ಯವಸ್ಥೆಯನ್ನು ಹೊಂದಿದೆ. ಏಕಕಾಲದಲ್ಲಿ 100 ಕ್ಕೂ ಹೆಚ್ಚು ಜನರು ಇದರ ಮೇಲೆ ನಡೆಯಬಹುದು ಎನ್ನಲಾಗಿದೆ. ಸೇತುವೆಯು 15 ಲೈಫ್ ಗಾರ್ಡ್‌ಗಳು, 50 ಲೈಫ್‌ಬಾಯ್‌ಗಳು ಮತ್ತು ಸೇತುವೆಯ ಕೊನೆಯಲ್ಲಿ ಒಂದು ದೋಣಿಯನ್ನು ಹೊಂದಿದೆ. ಲೈಫ್ ಜಾಕೆಟ್ ಧರಿಸುವುದು ಅನಿವಾರ್ಯವಾಗಿದೆ.