ಮಂಗಳೂರು: ನಾವೆಲ್ಲರೂ ದೇವರ ಸೃಷ್ಟಿ. ಮನುಷ್ಯ ತನ್ನ ಜೊತೆಗಾರ ಮನುಷ್ಯರಲ್ಲಿ ಭೇದವೆಣಿಸಬಹುದು ಆದರೆ ದೇವರ ಸಮ್ಮುಖದಲ್ಲಿ ಬಡವ-ಬಲ್ಲಿದ, ಹೆಣ್ಣು-ಗಂಡು, ಅಷ್ಟೇ ಏಕೆ ತೃತೀಯ ಲಿಂಗಿಗಳೂ ಸಮಾನರು. ದೇವರ ಭಕ್ತಿಗೆ ಲಿಂಗದ ಭೇದವುಂಟೆ? ಇಲ್ಲ ಎಂದು ತೋರಿಸಿಕೊಡುತ್ತಿದ್ದಾರೆ ಮಂಗಳೂರಿನ ಐವರು ತೃತೀಯ ಲಿಂಗಿಗಳು.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐವರು ತೃತೀಯ ಲಿಂಗಿಗಳು ಸೇರಿ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಸೇವೆಯನ್ನು ನೀಡಲು ನಿರ್ಧರಿಸಿದ್ದಾರೆ. ಮಂಗಳೂರಿನ ಕೋಡಿಕಲ್ ಕಟ್ಟೆ ಮೈದಾನದಲ್ಲಿ ಫೆ.25 ರಂದು ಸಾಂಜೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಆಯೋಜಿಸುತ್ತಿದ್ದಾರೆ. ಸುಮಾರು 1500 ಜನ ಸೇರಲಿದ್ದು, ಎಲ್ಲರಿಗೂ ಅನ್ನದಾನದ ವ್ಯವಸ್ಥೆ ಇದೆ.
ಮಂಗಳೂರು ಅಶೋಕನಗರದ ದಂಬೇಲ್ ನಲ್ಲಿ ವಾಸವಿರುವ ಐಶ್ವರ್ಯ ಮತ್ತು ಸಂಗಡಿಗರು ತಾವು ಖಾಸಗಿ ಕಂಪನಿಗಳಲ್ಲಿ ಕಷ್ಟಪಟ್ಟು ದುಡಿದ ಸಂಪಾದನೆಯನ್ನು ಒಟ್ಟು ಸೇರಿಸಿ ಯಕ್ಷಗಾನ ಬಯಲಾಟ ಸೇವೆಯನ್ನು ನಡೆಸುತ್ತಿದ್ದಾರೆ. ಇತರ ತೃತೀಯಲಿಂಗಿಗಳಂತೆ ಬೇಡುವ ಅಥವಾ ಲೈಂಗಿಕ ಕಾಯಕದಲ್ಲಿ ತೊಡಗದೆ ಗೌರವಯುತ ಬದುಕು ಕಟ್ಟಿಕೊಂಡಿರುವ ಇವರು, ಹರಕೆ ಸೇವೆ ತೀರಿಸಲು ಸಾರ್ವಜನಿಕರಿಂದ ದೇಣಿಗೆಯನ್ನೂ ಪಡೆದುಕೊಂಡಿಲ್ಲ. ಇವರೆಲ್ಲರೂ ತಮ್ಮ ಸ್ವಂತ ದುಡಿಮೆಯಿಂದಲೆ ಬಯಲಾಟ ಸೇವೆಯನ್ನು ನಡೆಸುತ್ತಿರುವುದು ಪ್ರಶಂಸನೀಯ.
ಕಷ್ಟದಿಂದ ದುಡಿದ ಹಣವನ್ನು ಪೋಲು ಮಾಡದೆ ದೇವಿಯ ಮೇಲಿನ ಭಕ್ತಿಯ ರೂಪದಲ್ಲಿ ಯಕ್ಷಗಾನ ಸೇವೆ ನೀಡಲು ಮುಂದಾಗಿರುವ ಇವರ ನಡೆಯ ಬಗ್ಗೆ ಸಮಾಜದಲ್ಲಿ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ.