ಭಾರತೀಯ ವಾಯುಪಡೆಗೆ ಐದು ರಫೇಲ್‌ ಯುದ್ಧವಿಮಾನಗಳು ಅಧಿಕೃತವಾಗಿ ಸೇರ್ಪಡೆ

ಅಂಬಾಲಾ: ಭಾರತೀಯ ವಾಯುಪಡೆಗೆ ಇಂದು ಐದು ರಫೇಲ್‌ ಯುದ್ಧವಿಮಾನಗಳು ಅಧಿಕೃತವಾಗಿ ಸೇರ್ಪಡೆಗೊಂಡಿತು.

ಇಲ್ಲಿರುವ ವಾಯುನೆಲೆಯಲ್ಲಿ ಯುದ್ಧವಿಮಾನಗಳ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಸರ್ವಧರ್ಮ ಪೂಜೆ ಹಾಗೂ ಜಲಫಿರಂಗಿಗಳಿಂದ ಗೌರವ ಸಮರ್ಪಣೆ ನಂತರ ಈ ಯುದ್ಧವಿಮಾನಗಳ ಸಾಮರ್ಥ್ಯ ಪ್ರದರ್ಶನವೂ ನಡೆಯಿತು.

ಗಡಿ ವಿಷಯವಾಗಿ ಚೀನಾದೊಂದಿಗೆ ಸಂಘರ್ಷ ಏರ್ಪಟ್ಟಿರುವ ಸಂದರ್ಭದಲ್ಲಿಯೇ ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಿದ್ದು, ವಾಯುಪಡೆಗೆ ಮತ್ತಷ್ಟು ಬಲ ನೀಡಿದೆ.

ಈ ಸಂದರ್ಭದಲ್ಲಿ ಸಚಿವ ರಾಜನಾಥ್‌ಸಿಂಗ್‌, ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲಿ, ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ ಜನರಲ್‌ ಬಿಪಿನ್‌ ರಾವತ್‌, ಏರ್‌ ಚೀಫ್‌ ಮಾರ್ಷಲ್‌ ಆರ್‌.ಕೆ.ಎಸ್‌ ಭದೌರಿಯಾ ಹಾಜರಿದ್ದರು.
ಅತ್ಯಾಧುನಿಕ ರಫೇಲ್‌ ಯುದ್ಧವಿಮಾನಗಳನ್ನು ಫ್ರಾನ್ಸ್‌ನ ಡಾಸೊ ಏವಿಯೇಷನ್‌ ಕಂಪನಿ ನಿರ್ಮಿಸಿದ್ದು, ನಿಖರ ದಾಳಿ ಮಾಡುವ ಇವುಗಳ ಸಾಮರ್ಥ್ಯ ಸಾಬೀತಾಗಿದೆ.

₹ 59,000 ಕೋಟಿ ವೆಚ್ಚದಲ್ಲಿ 36 ರಫೇಲ್‌ ಯುದ್ಧವಿಮಾನಗಳ ಖರೀದಿ ಒಪ್ಪಂದವಾಗಿ ನಾಲ್ಕು ವರ್ಷಗಳಾಗಿದ್ದರೂ, ಮೊದಲ ಬ್ಯಾಚ್‌ನ ಐದು ಯುದ್ಧವಿಮಾನಗಳನ್ನು ಕಳೆದ ಜನವರಿಯಲ್ಲಿ ಭಾರತಕ್ಕೆ ತರಲಾಗಿತ್ತು.

ಎರಡನೇ ಹಂತದಲ್ಲಿ ನಾಲ್ಕು ಅಥವಾ ಐದು ರಫೇಲ್‌ ಯುದ್ಧವಿಮಾನಗಳು ನವೆಂಬರ್‌ನಲ್ಲಿ ಹಸ್ತಾಂತರಗೊಳ್ಳುವ ನಿರೀಕ್ಷೆ ಇದೆ. ಮುಂದಿನ ವರ್ಷದ ಅಂತ್ಯಕ್ಕೆ ಎಲ್ಲಾ ಯುದ್ಧವಿಮಾನಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.