ಉಡುಪಿ ವೀಡಿಯೋ ಪ್ರಕರಣ: ಆ. 4 ರಂದು ರಾಜ್ಯಪಾಲರನ್ನು ಭೇಟಿಯಾಗಿ ವಿಶೇಷ ತನಿಖೆಗೆ ಕೋರಿಕೆ ಸಲ್ಲಿಸಲಿರುವ ಉಡುಪಿ ಶಾಸಕರು

ಉಡುಪಿ: ಶೌಚಾಲಯದಲ್ಲಿ ಮೊಬೈಲ್ ಬಳಸಿ ಮೂವರು ವಿದ್ಯಾರ್ಥಿನಿಯರು ಸಹ ವಿದ್ಯಾರ್ಥಿನಿಯ ವೀಡಿಯೋ ಚಿತ್ರೀಕರಣ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲೆಯ ಐವರು ಶಾಸಕರು ಆಗಸ್ಟ್ 4 ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ತಿಳಿಸಲಿದ್ದು, ವಿಶೇಷ ತನಿಖೆಗೆ ಕೋರಿಕೆ ಸಲ್ಲಿಸಲಿದ್ದಾರೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನೇತ್ರ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಆಡಳಿತಾಧಿಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವ ಮೂಲಕ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಬುಧವಾರ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಬಗ್ಗೆ ಧ್ವನಿ ಎತ್ತಿದ್ದ ವಿದ್ಯಾರ್ಥಿಗಳ ಬಾಯಿ ಮುಚ್ಚಿಸಲು ಅವರ ಅಂಕಪಟ್ಟಿಗಳನ್ನು ಅಧಿಕಾರಿ ಅಬ್ದುಲ್ ಖಾದರ್ ಎತ್ತಿಟ್ಟಿದ್ದರು. ಪೊಲೀಸ್ ಕೇಸ್ ದಾಖಲಾದರೆ ಉದ್ಯೋಗ ಸಿಗುವುದಿಲ್ಲ ಮತ್ತು ಕೆಲಸದ ನಿಮಿತ್ತ ವಿದೇಶಕ್ಕೂ ಹೋಗುವಂತಿಲ್ಲ ಎಂದು ಹೇಳಿದ್ದರು ಎಂದು ಆರೋಪಿಸಿದ್ದಾರೆ.

ಈ ಹಿಂದೆ ಕಾಲೇಜಿನಲ್ಲಿ ನಡೆದ ಇಂತಹ ಘಟನೆಗಳ ಬಗ್ಗೆ ಕೆಲವು ವಿದ್ಯಾರ್ಥಿಗಳು ತಮ್ಮ ಬಳಿ ಹೇಳಿಕೊಂಡಿದ್ದಾರೆ ಎಂದು ಶಾಸಕರು ಹೇಳಿದ್ದಾರೆ.

ಮೂರು ಆರೋಪಿ ಹುಡುಗಿಯರ ತಂದೆಯಂದಿರು ಈಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಕ್ರಿಯ ಸದಸ್ಯರಾಗಿದ್ದರು ಹಾಗೂ ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಲಾಗಿದೆ. ಪ್ರಕರಣದ ತನಿಖಾಧಿಕಾರಿ ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ಅವರ ಮೇಲೆ ವಿಶ್ವಾಸವಿದೆ, ಅವರು ಸಂತ್ರಸ್ತರಿಗೆ ನ್ಯಾಯ ಒದಗಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಏತನ್ಮಧ್ಯೆ, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್‌ಗಳ ವರದಿಯನ್ನು ಸಲ್ಲಿಸಲು ಎಫ್‌ಎಸ್‌ಎಲ್ ತಜ್ಞರು ಆಗಸ್ಟ್ 25 ರವರೆಗೆ ಕಾಲಾವಕಾಶ ಕೋರಿದ್ದಾರೆ. ಆದರೆ, ಪೊಲೀಸರು ಶೀಘ್ರ ವರದಿ ಕೇಳಿದ್ದಾರೆ. ಆರೋಪಿ ಹುಡುಗಿಯರಿಗೆ ಚೇಷ್ಟೆ ಮಾಡುವುದನ್ನು ಉದ್ದೇಶ ಬಿಟ್ಟು ಬೇರೆ ಯಾವುದೇ ಉದ್ದೇಶವಿತ್ತೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ವಿಡಿಯೋಗಳನ್ನು ಆರೋಪಿಗಳ ಪ್ರಮುಖ ಸಂಪರ್ಕಗಳ ಜೊತೆ ಹಂಚಿಕೊಂಡಿದ್ದಾರೆಯೆ ಎನ್ನುವುದನ್ನು ತನಿಖೆ ನಡೆಸಲು ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.