ಮಲ್ಪೆ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ದೋಣಿಯೊಂದು ಭಟ್ಕಳದ ನೇತ್ರಾಣಿ ಸಮೀಪದಲ್ಲಿ ಬಂಡೆಗೆ ಬಡಿದು ಮುಳುಗಡೆಗೊಂಡಿದೆ. ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಬೋಟಿನವರು ರಕ್ಷಿಸಿದ್ದಾರೆ.
ಉದ್ಯಾವರ ಸಂಪಿಗೆ ನಗರದ ರಾಹಿಲ್ ಅವರಿಗೆ ಸೇರಿದ ಸೀ ಬರ್ಡ್ ಬೋಟ್ ಮೇ 21ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿತ್ತು. ಮೇ 22ರಂದು ಬೆಳಗ್ಗೆ ಭಟ್ಕಳ ನೇತ್ರಾಣಿ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಗಾಳಿ-ಮಳೆ ಆರಂಭವಾಗಿದ್ದು, ಪರಿಣಾಮ ನಾವಿಕನ ನಿಯಂತ್ರಣ ತಪ್ಪಿ ಕಲ್ಲು ಬಂಡೆಗೆ ಬಡಿದಿದೆ. ಈ ವೇಳೆ ನೀರು ಒಳಗೆ ತುಂಬಿ ಬೋಟ್ ಮುಳುಗಲಾರಂಭಿಸಿದೆ.
ಸಮೀಪದಲ್ಲಿದ್ದ ಪವನ ಪುತ್ರ 111 ಬೋಟಿನವರು ಧಾವಿಸಿ ಬಂದು ಈ ಬೋಟನ್ನು ಹಗ್ಗದ ಸಹಾಯದಿಂದ ಎಳೆದು ತರಲು ಪ್ರಯತ್ನ ಪಟ್ಟರೂ ಹಗ್ಗ ತುಂಡಾಗಿ ಬೋಟು ಸಂಪೂರ್ಣ ಮುಳುಗಡೆಗೊಂಡಿದೆ.
ಬೋಟಿನಲ್ಲಿದ್ದ ಏಳೂ ಮಂದಿಯನ್ನು ರಕ್ಷಿಸಿ ಮಲ್ಪೆ ಬಂದರಿಗೆ ಕರೆ ತರಲಾಗಿದೆ. ಸುಮಾರು 45 ಲಕ್ಷ ರೂ. ನಷ್ಟ ಎಂದು ಅಂದಾಜಿಸಲಾಗಿದೆ.