ಕರಾವಳಿಯಲ್ಲಿ ಮುಂದಿನ ಎರಡು ತಿಂಗಳು ಮೀನುಗಾರಿಕೆ ನಿಷೇಧ: ಏರಲಿದೆ ಮೀನಿನ ದರ?

ಉಡುಪಿ/ಮಂಗಳೂರು: ಮೀನು ಪ್ರಿಯರಿಗೆ ಅಪ್ರಿಯವಾದ ಸುದ್ದಿ ಇದು. ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕಾ ಋತು ಮುಕ್ತಾಯವಾಗಿದ್ದು, ಉಭಯ ಜಿಲ್ಲೆಗಳಲ್ಲಿಯೂ ಜೂ.1ರಿಂದ ಜು.31ರ ವರೆಗೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಮೀನಿನ ಪೂರೈಕೆಯಲ್ಲಿ ವ್ಯತ್ಯಾಸಗಳಾಗುವುದರಿಂದ ಮೀನಿನ ದರ ಗಗನಕ್ಕೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹೀಗಾದಲ್ಲಿ ಮೀನು ಖರೀದಿಸುವುದು ಕಷ್ಟವಾಗಿದ್ದು, ಮೀನು ಪ್ರಿಯರಿಗೆ ನಿರಾಶೆಯಾಗಲಿದೆ.

ಮೀನುಗಾರಿಕಾ ಅವಧಿ ಮುಗಿದಿರುವುದರಿಂದ ಇನ್ನು ಆಗಸ್ಟ್ ತಿಂಗಳವರೆಗೂ ಕಾಯಬೇಕಾಗುತ್ತದೆ. ಆಳ ಸಮುದ್ರದ ಮೀನುಗಾರಿಕೆಗೆ ಜೂನ್ ಮತ್ತು ಜುಲೈ ತಿಂಗಳು ರಜಾ ಅವಧಿಯಾಗಿದ್ದು ಈ ಅವಧಿಯಲ್ಲಿ ಮೀನುಗಾರಿಕೆಯನ್ನು ಸರ್ಕಾರ ನಿಷೇಧಿತ್ತದೆ. ಆಳ ಸಮುದ್ರ ಮೀನುಗಾರಿಕೆ ನಡೆಸುವ ಡೀಪ್ ಸೀ ಬೋಟ್ ಮತ್ತು ಪರ್ಸಿನ್ ಬೋಟ್ಗಳು ಈ ಅವಧಿಯಲ್ಲಿ ಮೀನುಗಾರಿಕೆಗೆ ತೆರಳುವಂತಿಲ್ಲ. ಅಲ್ಲದೆ, ಮಳೆಗಾಲದ ಆರಂಭದ ಎರಡು ತಿಂಗಳ‌ ಅವಧಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಕಾಲ. ಮೀನುಗಳು‌ ಈ ಅವಧಿಯಲ್ಲಿ ಮೊಟ್ಟೆ ಇಡುತ್ತವೆ ಮತ್ತು ಈ ಅವಧಿಯಲ್ಲಿ ಮೀನುಗಾರಿಕೆ ನಡೆಸಿದರೆ ಮೀನುಗಳ ಸಂತತಿ ಕಡಿಮೆ ಆಗಿ ಮತ್ಸ್ಯ ಕ್ಷಾಮ ಆಗುವ ಸಾಧ್ಯತೆಗಳಿವೆ. ಮಳೆಗಾಲದ ಸಂದರ್ಭದಲ್ಲಿ ಸಮುದ್ರವೂ ಅಬ್ಬರಿಸುತ್ತಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಆಳ ಸಮುದ್ರಕ್ಕೆ ತೆರಳುವುದು ಅತ್ಯಂತ ಅಪಾಯಕಾರಿ.

ಮೀನುಗಾರಿಕಾ ನಿಷೇಧದ ಹಿನ್ನೆಲೆಯಲ್ಲಿ ಮಲ್ಪೆ ಮತ್ತು ಮಂಗಳೂರಿನ ಬಹುತೇಕ ಯಾಂತ್ರಿಕ ಬೋಟುಗಳು ದಕ್ಕೆಯಲ್ಲಿ ಲಂಗರು ಹಾಕಿವೆ. ಮಂಗಳೂರು, ಒಡಿಶಾ, ಮಹಾರಾಷ್ಟ್ರ, ಗೋವಾ ಮತ್ತು ಇತರ ಕರಾವಳಿ ಪ್ರದೇಶಗಳಿಂದ ನಿಯಮಿತವಾಗಿ 500 ರಿಂದ 600 ಕೆಜಿ ಮೀನುಗಳನ್ನು ಖರೀದಿ ಮಾಡಲಾಗುತ್ತದೆ. ನಿಷೇಧದ ಸಮಯದಲ್ಲಿ ಕೇವಲ 200 ರಿಂದ 250 ಕೆಜಿ ಮೀನುಗಳಷ್ಟೇ ಪಡೆಯಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಬೆಲೆಗಳೂ ಕೂಡ ಹೆಚ್ಚಾಗುತ್ತವೆ. ಕರಾವಳಿಯ ಮನೆಗಳಲ್ಲಿ ಇನ್ನೆರಡು ತಿಂಗಳು ಏನಿದ್ದರೂ ‘ನುಂಗೆಲ್ ಮೀನು’ ಗಳದ್ದೇ ಕಾರುಬಾರು!