ಜೂನ್ 4ರ ವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ

ಉಡುಪಿ, ಮೇ 28:  ಭಾರತೀಯ ಹವಾಮಾನ ಇಲಾಖೆಯಿಂದ ಮೇ 29  ರಂದು ಅರೇಬಿಯನ್ ಸಮುದ್ರದ ಪಶ್ಚಿಮ ಮತ್ತು ನೈಋತ್ಯ ಕೇಂದ್ರ ಭಾಗದ ಸುತ್ತಮುತ್ತ ಹಾಗೂ ಮೇ 31 ರಂದು ಅರೇಬಿಯನ್ ಸಮುದ್ರದ ಆಗ್ನೇಯ ಭಾಗದ ಸುತ್ತಮುತ್ತ ನಿಮ್ನ ಒತ್ತಡ ಉಂಟಾಗುವ ಸಂಭವವಿರುವುದಾಗಿ ಮಾಹಿತಿ ಲಭಿಸಿರುತ್ತದೆ. ಆದ್ದರಿಂದ ಮೀನುಗಾರರು ಸಮುದ್ರದ ಈ ಭಾಗಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಭಾರತ ಸರಕಾರದ ಮೆಟಿಯಾರೊಲಾಜಿಕಲ್ ಡಿರ್ಪಾಟ್‌ಮೆಂಟ್ (ಮಿನಿಷ್ಟ್ರಿ ಆಫ್ ಅರ್ಥ್ ಸೈನ್ಸ್), ಹವಾಮಾನ ಕೇಂದ್ರ, ತಿರುವನಂತಪುರಂ ರವರಿಂದ ಪಡೆದ ಅಧಿಕೃತ ಮಾಹಿತಿ ಮೇರೆಗೆ ಅರಬ್ಬಿ ಸಮುದ್ರದ ದಕ್ಷಿಣಭಾಗ ಮತ್ತು ಪೂರ್ವ ಮಧ್ಯಭಾಗದ ವ್ಯಾಪ್ತಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜಾಸ್ತಿ ಇರುತ್ತದೆ. ಆದುದರಿಂದ ಮೇ 31 ರಿಂದ ಜೂನ್ 4 ರ ವರೆಗೆ ಮೀನುಗಾರರು ಆಳಸಮುದ್ರ ಮೀನುಗಾರಿಕೆಗೆ ತೆರಳಬಾರದು ಎಂಬುದಾಗಿ ಎಚ್ಚರಿಸಲಾಗಿದೆ.

ಈಗಾಗಲೇ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಲ್ಲಿ ಈ ಕೂಡಲೇ ಸುರಕ್ಷಿತ ಬಂದರು ಪ್ರದೇಶಗಳಿಗೆ ವಾಪಸ್ಸಾಗುವಂತೆ ಮೀನುಗಾರಿಕಾ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.