ಆಳ ಸಮುದ್ರಕ್ಕೆ ತೆರಳಿದ್ದ ದೋಣಿ ಮುಳುಗಡೆ: ಮೀನುಗಾರರ ರಕ್ಷಣೆ; 15 ಲಕ್ಷ ರೂಪಾಯಿ ನಷ್ಟ ಅಂದಾಜು

ಉಡುಪಿ: ಆಳ ಸಮುದ್ರಕ್ಕೆ ಮೀನುಗಾರಿಕೆಗೆಂದು ತೆರಳಿದ್ದ ದೋಣಿಯೊಂದು ಪ್ರಕ್ಷುಬ್ಧ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಮಂಗಳೂರು ಮೂಲದ ಜೈಸನ್ ಲೋಬೋ ಮಾಲಕತ್ವದ ಕ್ವೀನ್ ಮೇರಿ ಹೆಸರಿನ ದೋಣಿ ಮಂಗಳೂರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸಿ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪ್ರತಿಕೂಲ ಹವಾಮಾನ ಇದ್ದ ಕಾರಣ ದೋಣಿಯನ್ನು ಮಲ್ಪೆ ಕಡೆ ತಿರುಗಿಸಲಾಗಿದೆ. ಈ ಸಂದರ್ಭದಲ್ಲಿ ನೀರಿನ ಮಧ್ಯೆ ಇದ್ದ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ದೋಣಿ ಮುಳುಗಡೆಯಾಗಿದೆ.

ಪುಣ್ಯಕ್ಕೆ ಅದೇ ಸಂದರ್ಭದಲ್ಲಿ ದೋಣಿಯ ಪಕ್ಕದಲ್ಲಿ ಇನ್ನೊಂದು ದೋಣಿ ಇದ್ದು, ಅದರಲ್ಲಿದ್ದ ಮೀನುಗಾರರು ನಾಲ್ವರು ಮೀನುಗಾರರ ರಕ್ಷಣೆ ಮಾಡಿ ಜೀವ ಉಳಿಸಿದ್ದಾರೆ.

5 ಲಕ್ಷ ರೂಗಳ ಮೀನು ಮತ್ತು ದೋಣಿ ಸೇರಿ ಒಟ್ಟು 15 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು ಮಲ್ಪೆಯ ಆಪದ್ಭಾಂದವ ಈಶ್ವರ್ ಮಲ್ಪೆ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.