ಮಲ್ಪೆ : ಸಮುದ್ರ ಮಧ್ಯೆ ಅವಘಡಗಳು ಸಂಭವಿಸಿದಾಗ ತುರ್ತು ಸೇವೆಗಾಗಿ ಕರಾವಳಿ ಕಾವಲು ಪಡೆಯಲ್ಲಿ ಸೀ ಆ್ಯಂಬುಲೆನ್ಸ್ ಇಲ್ಲ. ಈ ಬಗ್ಗೆ ಮೀನುಗಾರರು ಹಲವು ವರ್ಷದಿಂದ ಬೇಡಿಕೆ ಸಲ್ಲಿಸಿದ್ದರೂ ಸರಕಾರದಿಂದ ಯಾವುದೇ ಮನ್ನಣೆ ದೊರಕಿಲ್ಲ.
ರಾಜ್ಯದ 320 ಕಿ.ಮೀ. ಕರಾವಳಿಯ ಭದ್ರತೆ ಮತ್ತು ಕಾರ್ಯಾಚರಣೆ ಜತೆಗೆ ಸಮುದ್ರದ ಮಧ್ಯೆ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರರನ್ನು ರಕ್ಷಿಸುವ ಕೆಲಸವನ್ನು ಕರಾವಳಿ ಕಾವಲು ಪಡೆಗೆ ವಹಿಸಲಾಗಿದೆ. ಮಲ್ಪೆಯಲ್ಲಿ ಇದರ ಕೇಂದ್ರ ಕಚೇರಿ ಇದ್ದು, ಮಲ್ಪೆ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ 85ಕ್ಕೂ ಹೆಚ್ಚು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಜೊತೆಗೆ ಇಲ್ಲಿನ ಸ್ಥಳೀಯ ಜೀವ ರಕ್ಷಕರೂ ಮೀನುಗಾರರನ್ನು ಕಾಪಾಡಿದ್ದಾರೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಸದಾ ಅಪಾಯದ ಸ್ಥಿತಿಯಲ್ಲಿ ಸಮುದ್ರದ ಮಧ್ಯ ಕಾರ್ಯ ನಿರ್ವಹಿಸುವ ಮೀನುಗಾರರಲ್ಲಿ ಹಲವರು ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ. ಬೋಟ್ ಮುಳುಗಡೆ ಮತ್ತು ಇತರ ಸಮಸ್ಯೆಗೆ ಸಿಲುಕಿದಾಗ ಮೀನುಗಾರರನ್ನು ಇನ್ನೊಂದು ಬೋಟ್‌ನವರು ರಕ್ಷಿಸಿ ಬಂದರಿಗೆ ತರುವ ಮುನ್ನ ಹಾಗೂ ಅನಂತರ ಅಲ್ಲಿಂದ ಆಸ್ಪತ್ರೆಗೆ ಸಾಗಿಸುವ ನಡುವೆ ಸಾಕಷ್ಟು ಸಮಯ ವ್ಯರ್ಥವಾಗುವುದರಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚು.
ಕರಾವಳಿಯಲ್ಲಿ ಒಟ್ಟು 15 ರಕ್ಷಣಾ ಬೋಟ್‌ಗಳಿದ್ದು ಇವುಗಳು ಬಹುತೇಕ ಸುಸ್ಥಿತಿಯಲ್ಲಿಲ್ಲ. ಹವಾಮಾನ ವೈಪರೀತ್ಯ ಹಾಗೂ ಇನ್ನಿತರ ಕಾರಣಗಳಿಂದಾಗಿ ಸಮುದ್ರದಲ್ಲಿ ಬೋಟ್ ಮುಳುಗಡೆಯಾಗುವುದು, ಇತರ ಅವಘಡಗಳಾಗುವುದರಿಂದ ಕಾವಲು ಪಡೆಯ ಎಲ್ಲ ಠಾಣೆಗಳಿಗೂ ಸುಸಜ್ಜಿತ ರಕ್ಷಣಾ ಬೋಟ್ ಒದಗಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ.