ಹಿಂದುತ್ವ ಹಾಗೂ ರಾಷ್ಟ್ರ ರಕ್ಷಣೆಯಲ್ಲಿ ಮೀನುಗಾರರ ಪಾತ್ರ ಮಹತ್ವದ್ದು: ಕ್ಯಾ.ಬೃಜೇಶ್ ಚೌಟ

ಮಂಗಳೂರು: ಹಿಂದೂಗಳ ಭದ್ರಕೋಟೆ ಉಳಿಯಲು ಮೀನುಗಾರರು ಕಾರಣ. ಮೀನುಗಾರರು ಹಿಂದುತ್ವದ ಸೈನಿಕರು ಕೂಡ.‌ ರಾಷ್ಟ್ರದ ಬಗ್ಗೆ ಅತೀವ ಪ್ರೇಮ ಇಟ್ಟುಕೊಂಡ ಸಮುದಾಯವಿದು. ಬಿಜೆಪಿ ಆಲೋಚನಾ‌ ಪ್ರಕ್ರಿಯೆಯಲ್ಲಿ ಮೀನುಗಾರರ ಸಮುದಾಯವೂ ದೊಡ್ಡ ಅಂಗ.‌ ಪಕ್ಷವನ್ನು ಕಟ್ಟುವಲ್ಲಿ ಅವರ ಕೊಡುಗೆ ಮಹತ್ತರವಾದುದು ಎಂದು ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಹೇಳಿದರು.

ಪಕ್ಷದ ಮೀನುಗಾರರ ಪ್ರಕೋಷ್ಠ ವತಿಯಿಂದ ಇಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.‌

ಮೀನುಗಾರರ ಮನಸ್ಸು ಸೈನಿಕರಂತೆ. ದೇಶದ ನೌಕಾಪಡೆ ಬಲಗೊಳ್ಳುವ ಮೊದಲೇ ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಗಾಗಿ ಮೀನುಗಾರರು ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಂಘ ಪರಿವಾರದ ಸಂಘಟನೆಗ ಶಕ್ತಿ ನೀಡಿದ್ದು ಮೀನುಗಾರರು. ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಆರಂಭಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಬಂದ 70 ವರ್ಷದ ಬಳಿಕ ಮೀನುಗಾರ ಸಮಾಜಕ್ಕೆ ನ್ಯಾಯ ಒದಗಿಸಿದ್ದಾರೆ ಎಂದರು.

ಸಮುದ್ರವೇ ಕರಾವಳಿಗರ ಆಸ್ತಿ. ಆರ್ಥಿಕ ಪ್ರಯೋಜನಕ್ಕೆ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು ಇದನ್ನೇ.‌ ಗುಜರಾತಿನ ಬಂದರುಗಳು ಮುಂಬೈ ಬಂದರುಗಳನ್ನು ಮೀರಿಸುವ ಮಟ್ಟಿಗೆ ಬೆಳೆದಿವೆ. ಈ ದಿಸೆಯಲ್ಲಿ ನಾವೂ ಯೋಚಿಸಬೇಕು. ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿ‌ ಆಗದಂತೆ ಎಚ್ಚರವಹಿಸಿ ರಾಜ್ಯದ ಒಳನಾಡಿಗೆ ರೈಲು ಮತ್ತು ರಸ್ತೆ ಸಂಪರ್ಕವನ್ನು ಅಭಿವೃದ್ಧಿಪಡಿಸಬೇಕು ಎಂದರು.

ಸಸಿಹಿತ್ಲು ಕಿನಾರೆಯು ಕಡಲ ಸಾಹಸ ಕ್ರೀಡೆಗೆ ಸೂಕ್ತ ಪ್ರದೇಶ. ಇದನ್ನೂ ಆರ್ಥಿಕವಾಗಿ ಬಳಸಿಕೊಳ್ಳಬೇಕಿದೆ. ಕುಳಾಯಿ ಬಂದರು ನಿರ್ಮಾಣವಾಗುತ್ತಿದೆ. ನವಮಂಗಳೂರು ಬಂದರು ಯೋಜನೆಯಿಂದ ನಿರ್ವಸಿತರಾದವರಿಗೆ ನ್ಯಾಯ ಸಿಗದೇ ಇರುವುದೂ ಗಮನದಲ್ಲಿದೆ ಎಂದರು.

ಮುಖಂಡ ರಾಮಚಂದರ್‌ ಬೈಕಂಪಾಡಿ ಮಾತನಾಡಿ ಜಿಲ್ಲೆಯಲ್ಲಿ 1989ರ ಬಳಿಕ ಮೀನುಗಾರರ ಸಮಾಜಕ್ಕೆ ರಾಜಕೀಯವಾಗಿ ಅವಕಾಶ ಸಿಕ್ಕಿಲ್ಲ. ಆದರೂ ಈ ಸಮುದಾಯ ಪ್ರತಿ ಚುನಾವಣೆಯಲ್ಲೂ ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿದೆ. ಮೀನುಗಾರರು ಸಂಘಟಿತರಾಗಿ ಬಿಜೆಪಿ ಅಭ್ಯರ್ಥಿಯನ್ನು 4 ಲಕ್ಷಕ್ಕೂ ಹೆಚ್ಚು ಮತಗಳಿಂದ‌ ಗೆಲ್ಲಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಬಿಜೆಪಿಯ ದೊಡ್ಡ ಆಸ್ತಿ ಮೊಗವೀರ‌ ಸಮಾಜ. ಕಡಲ್ಕೊರೆತ ಸಮಸ್ಯೆ ನಿವಾರಿಸಲು ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 202 ಕೋಟಿ ಅನುದಾನ ಮಂಜೂರಾಗಿದೆ. ಎಡಿಬಿ ನೆರವಿನ ಈ ಯೋಜನೆಯನ್ನು ಜಿಲ್ಲೆಯ ಶಾಸಕರೊಬ್ಬರು ತಮ್ಮ ಕ್ಷೇತ್ರಕ್ಕೆ ಸೀಮಿತಗೊಳಿಸಿದರು ಎಂದು ಆರೋಪಿಸಿದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಕ್ಷದ ಜಿಲ್ಲಾ ಮೀನುಗಾರರ ಪ್ರಕೋಷ್ಠದ ಅಧ್ಯಕ್ಷ ಗಿರೀಶ್ ಕರ್ಕೇರ, ಸಹ ಸಂಚಾಲಕ ಯಶವಂತ ಅಮೀನ್ ಭಾಗವಹಿಸಿದ್ದರು.