ಮಲ್ಪೆ: ಆಕಸ್ಮಿಕವಾಗಿ ಬೋಟ್ ನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ; 14 ಗಂಟೆಗಳ ಬಳಿಕ ರಕ್ಷಣೆ

ಮಲ್ಪೆ: ಆಕಸ್ಮಿಕವಾಗಿ ಪರ್ಸೀನ್ ಬೋಟ್ ನಿಂದ ಸಮುದ್ರಕ್ಕೆ ಬಿದ್ದ ಮೀನುಗಾರರನ್ನು 14 ಗಂಟೆಗಳ ಬಳಿಕ ಜೀವಂತವಾಗಿ ರಕ್ಷಿಸಿದ ಘಟನೆ ಮಲ್ಪೆಯಲ್ಲಿ ನಡೆದಿದೆ.

ರಕ್ಷಿಸಲ್ಪಟ್ಟ ಮೀನುಗಾರನನ್ನು ಆಂಧ್ರಪ್ರದೇಶದ ಪುಕಾಲು ಕಾಮೆಯಾ ಎಂದು ಗುರುತಿಸಲಾಗಿದೆ. 35 ಸದಸ್ಯರ ಮೀನುಗಾರರ ತಂಡವು ತಮ್ಮ ಮೀನುಗಾರಿಕೆ ಚಟುವಟಿಕೆ ಮುಗಿಸಿ ಪರ್ಸೀನ್ ಬೋಟ್ ನಲ್ಲಿ ಹಿಂದಿರುಗುತ್ತಿದ್ದಾಗ ಹಿಂದೆ ಕುಳಿತಿದ್ದ ಕಾಮೆಯಾ ಆಕಸ್ಮಿಕವಾಗಿ ದೋಣಿಯಿಂದ ಸಮುದ್ರಕ್ಕೆ ಬಿದ್ದಿದ್ದಾರೆ. ಸ್ವಲ್ಪ ದೂರ ಕ್ರಮಿಸಿದ ಬಳಿಕ ಅದೇ ದೋಣಿಯಲ್ಲಿದ್ದ ಇತರ ಮೀನುಗಾರರಿಗೆ ಕಾಮೆಯಾ ಕಾಣೆಯಾಗಿರುವುದು ತಿಳಿದು ಬಂದು ಕೂಡಲೇ ದೋಣಿಯನ್ನು ಹಿಂದಕ್ಕೆ ತೆಗೆದುಕೊಂಡು ನಾಪತ್ತೆಯಾಗಿರುವ ತಮ್ಮ ಮೀನುಗಾರ ಸ್ನೇಹಿತನಿಗಾಗಿ ಹುಡುಕಾಟ ಆರಂಭಿಸಿದರೂ ಆತನ ಪತ್ತೆಯಾಗಿರಲಿಲ್ಲ.

ನಂತರ ಮೀನುಗಾರರು ಕರಾವಳಿ ಕಾವಲು ಪಡೆಗೆ ಈ ವಿಷಯ ತಿಳಿಸಿದ್ದಾರೆ. ಅಷ್ಟರಲ್ಲಿ ಸಮುದಕ್ಕೆ ಬಿದ್ದಿದ್ದ ಮೀನುಗಾರ ಸ್ವಲ್ಪ ಹೊತ್ತು ಈಜಿ ಅಲ್ಲೇ ಮೀನು ಹಿಡಿಯಲು ಹಾಕಿದ್ದ ಬಲೆ ಮತ್ತು ಅದರ ಫ್ಲ್ಯಾಗ್ ಪೋಸ್ಟ್ ಅನ್ನು ಕಂಡು ಅದನ್ನು ಆಸರೆಯಾಗಿ ಹಿಡಿದುಕೊಂದು ಪ್ರಾಣ ಕಾಪಾಡಿಕೊಂಡಿದ್ದಾರೆ. ಎಪ್ರಿಲ್ 17 ರಂದು ಸಂಜೆ 6 ಗಂಟೆಗೆ ಬಲೆ ಹಾಕಲಾಗಿದ್ದು, ಮರುದಿನ ಬೆಳಗಿನ ಜಾವ 3 ಗಂಟೆಗೆ ಮೀನುಗಾರರು ಸ್ಥಳಕ್ಕೆ ತಲುಪಿದಾಗ ಕಾಮೆಯಾ ಫ್ಲ್ಯಾಗ್ ಪೋಸ್ಟ್ ಬೆಂಬಲದೊಂದಿಗೆ ನಿಂತಿರುವುದು ಕಂಡುಬಂದಿದೆ.

ಕೂಡಲೇ ಅವರನ್ನು ನೀರಿನಿಂದ ಹೊರತೆಗೆದು ಬೋಟ್ ನಲ್ಲಿ ಸುರಕ್ಷಿತವಾಗಿ ದಡಕ್ಕೆ ಕರೆತರಲಾಯಿತು. ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಮೀನುಗಾರ ಚೇತರಿಸಿಕೊಂಡಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ವರದಿಯಾಗಿದೆ.

ನಾನು ಕಳೆದ ಐದು ವರ್ಷಗಳಿಂದ ಮಲ್ಪೆಯಲ್ಲಿ ದೋಣಿ ನಿರ್ವಹಣೆ ಮತ್ತು ಇತರ ಕೆಲಸಗಳನ್ನು ಮಾಡುತ್ತಿದ್ದೇನೆ. ನಾನು ದೋಣಿಯಿಂದ ಬಿದ್ದಾಗ ದೋಣಿ ನನ್ನನ್ನು ಹುಡುಕಿಕೊಂಡು ಹಿಂದಿರುಗಿತು. ನಾನು ದೋಣಿಯಲ್ಲಿದ್ದ ಜನರಿಗೆ ಕೈ ಬೀಸಿದೆ ಮತ್ತು ಅವರ ಗಮನವನ್ನು ಸೆಳೆಯಲು ಸನ್ನೆಗಳನ್ನು ಮಾಡಿದೆ. ಆದರೆ ಅವರು ನನ್ನನ್ನು ಗಮನಿಸಲಿಲ್ಲ. ನಂತರ, ನಾನು ಸಮುದ್ರದಲ್ಲಿ ಕೆಲವು ಪ್ಲಾಸ್ಟಿಕ್ ಬಾಟಲಿಗಳನ್ನು ಮತ್ತು ಮೀನುಗಾರಿಕಾ ಬಲೆಯನ್ನು ಹಿಡಿದುಕೊಂಡು ಪ್ರಾಣ ಕಾಪಾಡಿಕೊಂಡೆ ಎಂದು ಕಾಮೆಯಾ ಹೇಳಿದ್ದಾರೆ.