ಉಡುಪಿ: ನಗರದ ಮಲ್ಪೆ ಮೀನುಗಾರಿಕೆ ಬಂದರಿಗೆ ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಸೋಮವಾರ ಭೇಟಿ ನೀಡಿ ಪರೀಶಿಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಲ್ಪೆ ಬಂದರನ್ನು ಅವಲೋಕಿಸಿದಾಗ ಬಂದರಿನಲ್ಲಿ ಬೋಟ್ ನಿಲ್ಲಿಸಲು, ಅವುಗಳನ್ನು ಓಡಿಸಲು ಹಾಗೂ ಅವುಗಳನ್ನು ಎಳೆಯಲು ಸಮಸ್ಯೆ ಇದೆ. ಈ ಸಮಸ್ಯೆಗಳನ್ನು ನಿವಾರಿಸಲು ನೀಲನಕ್ಷೆಯನ್ನು ತಯಾರಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
2017-18 ನೇ ಸಾಲಿನಲ್ಲಿ ಬಂದರಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡಲಾಗಿತ್ತು. ಸಿ.ಆರ್.ಝಡ್ ಸಮಸ್ಯೆಯಿಂದ ಕಾಮಗಾರಿಗಳನ್ನು ಕೈಗೊಳ್ಳಲು ತಾಂತ್ರಿಕ ಅಡಚಣೆ ಉಂಟಾಗಿತ್ತು. ರಾಜ್ಯದ ಕರಾವಳಿ ಭಾಗದ 320 ಕಿ.ಮೀ ನ ಸಿ.ಆರ್.ಝಡ್ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ. ಇದು ಶೀಘ್ರದಲ್ಲಿಯೇ ಆಗಲಿದ್ದು ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಬಂದರಿನಲ್ಲಿ ಹೂಳು ತುಂಬಿದ್ದು, ಬೋಟುಗಳ ಸಂಚಾರಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆ, ಈಗಾಗಲೇ 3 ಕೋಟಿ ರೂ. ವೆಚ್ಚದಲ್ಲಿ ಹೂಳು ಎತ್ತುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಬೋಟುಗಳ ಸುಗಮ ಸಂಚಾರಕ್ಕೆ ಬಂದರಿನಲ್ಲಿ ವರ್ಷಪೂರ್ತಿ ಹೂಳು ಎತ್ತಬೇಕೆಂಬ ಬೇಡಿಕೆ ಇದೆ. ಸರಕಾರ ಖಾಸಗಿ ಸಹಭಾಗಿತ್ವದಲ್ಲಿ ಅಂದರೆ ಪಿ.ಪಿ.ಪಿ ಮಾಡೆಲ್ನಲ್ಲಿ ಹೂಳು ಎತ್ತುವು ಯಂತ್ರವನ್ನು ಖರೀದಿ ಮಾಡಲು ಚಿಂತಿಸಿದೆ ಎಂದರು.
ಮಲ್ಪೆ ಬಂದರು ವಿಸ್ತರಣೆಗೆ ಜನರ ಬೇಡಿಕೆ ಇದೆ. ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಸ್ತರಿಸುತ್ತೇವೆ. ಬಹಳ ದಿನದಿಂದಲೂ ಈ ಭಾಗದ ಮೀನಿಗಾರರಿಂದ ಸೀ-ಆಂಬುಲೆನ್ಸ್ ವ್ಯವಸ್ಥೆ ಬೇಕೆಂದು ಬೇಡಿಕೆ ಇದೆ. ಈ ಬಾರಿಯ ಬಜೆಟ್ನಲ್ಲಿ ಅನುದಾನ ನೀಡಲಾಗುವುದು ಮಲ್ಪೆ ಬಂದರಿಗೂ ಸಹ ಸೀ-ಆಂಬುಲೆನ್ಸ್ ಕಲ್ಪಿಸಲಾಗುವುದು ಎಂದ ಅವರು, ಮೀನುಗಾರರಿಗೆ ಹಾಗೂ ಮೀನುಗಾರಿಕೆ ಮಹಿಳೆಯರಿಗೆ ಅನುಕೂಲವಾಗುವಂತೆ ಬಂದರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.
ಜಿಲ್ಲೆಯು ಮೀನುಗಾರರ ಸಂಕಷ್ಟ ನಿಧಿಯ 9 ಕೋಟಿ ರೂ ಕಳೆದ 4 ವರ್ಷ ಬಾಕಿ ಇತ್ತು. ಈಗಾಗಲೇ 8 ಕೋಟಿ ರೂ ಹಣವನ್ನು ಸರಕಾರ ಸಂಕಷ್ಟದಲ್ಲಿರುವವರ ಕುಟುಂಬದವರಿಗೆ ವಿತರಣೆ ಮಾಡಿದೆ ಎಂದರು. ಕಳೆದ ಸಾಲಿನಲ್ಲಿ ಸರಕಾರ ಕರ ರಹಿತ ಡಿಸೆಲ್ ಸಬ್ಸಿಡಿಯ ಅನುದಾನ 175 ಕೋಟಿ ರೂ ನೀಡಿತ್ತು. ನಮ್ಮ ಸರಕಾರ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ.ಗಳನ್ನು ನೀಡುತ್ತಿದೆ ಎಂದರು.
ಸರ್ಕಾರ ಮೀನುಗಾರರ ಪರವಾಗಿದ್ದು ಮೀನುಗಾರಿಕೆಗೆ ಪೂರಕವಾಗುವಂತಹ ಮೂಲಸೌಕರ್ಯಗಳನ್ನು, ಅಭಿವೃದ್ಧಿಗಳನ್ನು ಹಾಗೂ ಯೋಜನೆಗಳನ್ನು ಮಾಡಲು ಸರ್ಕಾರ ಬದ್ದವಾಗಿದೆ. ಮೀನುಗಾರಿಕೆಯನ್ನು ಮಾಡುವುದು ಕಷ್ಟದ ವೃತ್ತಿ. ನಂತರದಲ್ಲಿ ಅವುಗಳನ್ನು ಮಾರಾಟ ಮಾಡುವುದು ಅದು ಸಹ ಕಷ್ಟದ ಕೆಲಸ. ಸರ್ಕಾರ ಮೀನುಗಾರರ ಜೊತೆಗೆ ಅವರ ಅಗುಹೋಗುಗಳಿಗೆ ಸ್ಪಂದಿಸುತ್ತದೆ ಎಂದರು.