ಕುಂದಾಪುರ: ಮೀನುಗಾರಿಕೆಗಾಗಿ ಕೇರಳಕ್ಕೆ ತೆರಳಿದ ಮೀನುಗಾರರು ಮರಳಿ ಮನೆಗೆ!

ಕುಂದಾಪುರ: ಕೆಲ ದಿನಗಳ ಹಿಂದೆ ಮೀನುಗಾರಿಕೆಗಾಗಿ ಕೇರಳಕ್ಕೆ ತೆರಳಿದ ಕರಾವಳಿಯ ಮೀನುಗಾರರು ಮಂಗಳವಾರ ಮಧ್ಯಾಹ್ನ ಬೋಟ್‌ನಲ್ಲೇ ಕುಂದಾಪುರ ಕೋಡಿ ಕಡಲ ಕಿನಾರೆಗೆ ಬಂದಿಳಿದಿದ್ದಾರೆ.

ಕೇರಳಕ್ಕೆ ಮೀನುಗಾರಿಕೆಗಾಗಿ ತೆರಳಿದ ಕುಂದಾಪುರ, ಕಾರವಾರ ಹಾಗೂ ಕುಮಟಾದ ಸುಮಾರು ೬೦ ಮಂದಿ ಮೀನುಗಾರರು ೭ ಬೋಟ್‌ಗಳಲ್ಲಿ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಕೋಡಿ ಕಡಲ ಕಿನಾರೆಗೆ ಬಂದಿಳಿದ ಅವರನ್ನು ಕೋಡಿಯ ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಮತ್ತು ಸ್ನೇಹಿತರು ಎಲ್ಲಾ ಮೀನುಗಾರರನ್ನು ಬಸ್ ಮೂಲಕ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದರು.

ಎಲ್ಲರನ್ನೂ ಪರಿಶೀಲಸಿದ ಬಳಿಕ ಎಲ್ಲಾ ಮೀನುಗಾರರನ್ನು ಅವರವರ ಊರುಗಳಿಗೆ ಕಳುಹಿಸಿಕೊಡಲಾಯಿತು. ಕೇರಳದಲ್ಲಿ ಕೊರೋನಾ ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಮೀನುಗಾರರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಕೆಲ ಹೊತ್ತು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಜನದಟ್ಟಣೆ ಉಂಟಾಯಿತು.

ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಕೇರಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಮನೆಗೆ ಬಸ್ ಮೂಲಕವೂ ಬರಲಾಗದೆ ಸಾಕಷ್ಟು ತೊಂದರೆಗಳುಂಟಾಗಿತ್ತು. ಸ್ಥಳೀಯ ಮುಖಂಡರುಗಳು ಮೀನುಗಾರಿಕಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ತಂದಿದ್ದರು. ಕೋಟ ಶ್ರೀನಿವಾಸ ಪೂಜಾರಿಯವರ ಸೂಚನೆಯಂತೆ ಬೋಟ್‌ನಲ್ಲೇ ಮೀನುಗಾರರು ಕೋಡಿಗೆ ಬಂದಿಳಿದಿದ್ದು, ಸದ್ಯ ಮೀನುಗಾರರ ಕುಂಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.