ಮುಂಗಾರು ಋತುವಿನ ಎಫೆಕ್ಟು: ಕರಾವಳಿಯಲ್ಲಿ ಮೀನಿನ ದರ ದುಪ್ಪಟ್ಟು!!

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆಯ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ಹಾಗೂ ಎರಡು ತಿಂಗಳುಗಳವರೆಗೆ ಮೀನುಗಾರಿಕೆಗೆ ನಿಷೇಧ ಹೇರಿರುವುದರಿಂದ ನಿರೀಕ್ಷೆಯಂತೆಯೆ ಮೀನಿನ ದರ ದುಪ್ಪಟ್ಟಾಗಿದೆ.

ನಗರದ ಕೆಎಫ್‌ಡಿಸಿ ಯಲ್ಲಿ ಒಂದು ಕೆಜಿ ಬೊಳೆಂಜಿರ್ 1,600 ರೂ, ಅಂಜಲ್ ಮೀನು ಪ್ರತಿ ಕೆಜಿಗೆ 1300 ರೂಗೆ ಮಾರಾಟವಾಗಿದೆ. ಕೇವಲ 12 ದಿನಗಳ ಹಿಂದೆ ಈ ಮೀನುಗಳ ದರ ಈಗಿನ ದರದ ಅರ್ಧದಷ್ಟಿತ್ತು. ದೊಡ್ಡ ಸಿಗಡಿ ಕೆಜಿಗೆ 475 ರೂ ಹಾಗೂ ಬೂತಾಯಿ-ಬಂಗುಡೆ ಮೀನುಗಳು ಕ್ರಮವಾಗಿ ಪ್ರತಿ ಕೆಜಿಗೆ 250 ರೂ ಮತ್ತು 330 ರೂ ದರದಲ್ಲಿ ಮಾರಾಟವಾಗಿರುವುದಾಗಿ ವರದಿಯಾಗಿದೆ.

ಕೆಎಫ್‌ಡಿಸಿ ಮೂಲಗಳ ಪ್ರಕಾರ ಈ ಬಾರಿ ಮೀನಿನ ದರ ಹಿಂದಿನ ಬಾರಿಗಿಂತಲೂ ಹೆಚ್ಚಾಗಿದೆ. ಹತ್ತು ದಿನಗಳಿಗೊಮ್ಮೆ ಆಳ ಸಮುದ್ರದ ಮೀನುಗಾರಿಕೆಗೆ ತೆರಳುವ ಹಡಗುಗಳು ಕೂಡಾ ಡಿಸ್ಕೋ ಮೀನು, ಬೊಂಡಾಸ್, ಮದಿಮಾಲ್ ಮೀನುಗಳೊಂದಿಗೆ ಹಿಂತಿರುಗುತ್ತಿದ್ದು ಬಹುಬೇಡಿಕೆಯ ಮಾಂಜಿ ಮತ್ತು ಅಂಜಲ್ ಗಳು ಸಿಗದಿರುವುದೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗಿದೆ.

ಕಳೆದ ವರ್ಷ ಮಾಂಜಿ ಪ್ರತಿ ಕೆಜಿ 1000 ರೂ ಇದ್ದರೆ ಈ ಬಾರಿ 1500 ರೂ ಆಗಿದೆ. ಅಂಜಲ್ 800 ರೂ ಇದ್ದದ್ದು ಇದೀಗ 1200 ರೂಗೆ ಏರಿದೆ. ಮೀನಿನ ಕ್ಷಾಮದಿಂದಾಗಿ ಕೊಡ್ಡಾಯಿ ಮೀನು ದಾಖಲೆಯ 480 ರೂಗೆ ಮಾರಾಟವಾಗಿದೆ.

ಚಂಡಮಾರುತದ ಪ್ರಭಾವದಿಂದಾಗಿ ಸಾಂಪ್ರದಾಯಿಕ ಮೀನುಗಾರಿಕೆಯೂ ಸ್ಥಗಿತಗೊಂಡಿದೆ. ಇನ್ನೂ ಒಂದೆರಡು ಚಂಡಮಾರುತಗಳು ಉಂಟಾದಲ್ಲಿ ಸಮುದ್ರ ಮಂಥನ ನಡೆದು ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ದೊರೆಯಬಹುದು ಎಂದು ಮೀನುಗಾರರು ಹೇಳುತ್ತಾರೆ.

ಇದೀಗ ಹೊರರಾಜ್ಯಗಳ ಶೀತಲೀಕೃತ ಮೀನುಗಳು ನಗರದ ಮಾರುಕಟ್ಟೆಗಳಿಗೆ ಬರುತ್ತಿವೆ. ಈ ಮೀನುಗಳು ತಾಜಾ ಮೀನಿನಷ್ಟು ರುಚಿಕರವಾಗಿರುವುದಿಲ್ಲ ಅಲ್ಲದೆ ಈ ಬಾರಿ ಇವುಗಳ ಬೆಲೆಯೂ 20- 30% ದಷ್ಟು ಏರಿಕೆಯಾಗಿದೆ ಎನ್ನಲಾಗಿದೆ.