ಮಲ್ಪೆ: ಮೀನುಗಾರರ ಉತ್ಪಾದಕ ಕಂಪನಿಯ ಮೀನಿನ ಉಪ್ಪಿನಕಾಯಿ, ಮೀನಿನ ಮಸಾಲೆಗಳ ವ್ಯಾಪಾರ ಮಳಿಗೆ ಮತ್ತು ಉತ್ಪಾದನಾ ಘಟಕದ ಶುಭಾರಂಭ

ಮಲ್ಪೆ: ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ಸ್ಕೋಡ್ವೆಸ್ ಸಂಸ್ಥೆ ಶಿರಸಿ ಇದರ ಸಹಯೋಗದಲ್ಲಿ ಪ್ರಾರಂಭಗೊಂಡಿರುವ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಹೊಚ್ಚ ಹೊಸ ಮಾರಾಟ ಮಳಿಗೆ ಮತ್ತು ಉತ್ಪಾದನಾ ಘಟಕವು ಸಂತೆಕಟ್ಟೆಯಲ್ಲಿರುವ ಏಕ್ತಾ ಹೈಟ್ಸ್ ಸಂಕೀರ್ಣದ ನೆಲ ಮಹಡಿಯಲ್ಲಿ, ಸೆ. 29 ರಂದು ಶಾಸಕ ಯಶ್ ಪಾಲ್ ಎ ಸುವರ್ಣ ಇವರು ಉದ್ಘಾಟನೆಗೊಳಿಸಿದರು.

ನಂತರ ಮಾತನಾಡಿದ ಅವರು, ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಎಲ್ಲಾ ಉತ್ಪನ್ನಗಳು ಅತ್ಯಂತ ಶುಚಿ – ರುಚಿಯಾಗಿ ತಯಾರಾಗಿದ್ದು, ಮಲ್ಪೆಯ ಮೀನುಗಾರ ಮಹಿಳೆಯರು ತಯಾರಿಸಿದ್ದಾಗಿದೆ. ಈ ಎಲ್ಲಾ ಉತ್ಪನ್ನಗಳು ಈಗಾಗಲೇ ದೇಶದಾದ್ಯಂತ ನಡೆದ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ವ್ಯಾಪಾರ ಮೇಳಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ. ಈ ಕಂಪನಿಯ ಹೊಸ ವ್ಯಾಪಾರ ಮಳಿಗೆ ಮತ್ತು ಉತ್ಪಾದನಾ ಘಟಕವು ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.

ಕಂಪನಿಯಲ್ಲಿ ವಿವಿಧ ಬಗೆಯ ಮೀನಿನ ಉಪ್ಪಿನಕಾಯಿ, ಮೀನಿನ ಮಸಾಲೆ, ಒಣ ಮೀನಿನ ಚಟ್ನಿ, ವಿವಿಧ ಬಗೆಯ ಒಣ ಮೀನುಗಳು, ರೆಡಿ ಟು ಫ್ರೈ ಮೀನುಗಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮೀನಿನ ಉತ್ಪನ್ನಗಳು ಲಭ್ಯವಿದೆ.

ಕಂಪನಿಯ ಅಧ್ಯಕ್ಷೆ ವನಜ ಪುತ್ರನ್, ನಿರ್ದೇಶಕಿ ಜಯಂತಿ ಸಾಲಿಯಾನ್, ಜಯಂತಿ ಮೈಂದನ್, ಪದ್ಮಾವತಿ ಕಿರಣ್, ನಿರ್ಮಲ ಸುರೇಶ ಮತ್ತು ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ವಿಷ್ಣುಪ್ರಸಾದ್ ಕೆ ಕಾಮತ್ ಉಪಸ್ಥಿತರಿದ್ದರು.