ಮೀನಿನಲ್ಲಿರುವ ಈ ಬ್ಲ್ಯಾಕ್ ಪಾರ್ಟ್ ವೇಸ್ಟ್ ಅಂತ ಬಿಸಾಡ್ಬೇಡಿ: ಇದ್ರಲ್ಲಿದೆ ಅದ್ಬುತ ಆರೋಗ್ಯ

 ಡಾರ್ಕ್ ಮಸಲ್ ಗುಟ್ಟಿದು!

ಡಾರ್ಕ್ ಮಸಲ್ ಮೀನಿನ ದೇಹದ ಬೆನ್ನುಮೂಳೆಯ ಹತ್ತಿರದಲ್ಲಿರುವ ಸ್ನಾಯು ಭಾಗವಾಗಿದೆ. ಇದು ಸಾಮಾನ್ಯ ಬಿಳಿ ಮಾಂಸದಿಗಿಂತ ಹೆಚ್ಚು ಗಾಢವಾದ ಬಣ್ಣವನ್ನು ಹೊಂದಿರುತ್ತದೆ. ಈ ಭಾಗದಲ್ಲಿ ಮಯೋಗ್ಲೋಬಿನ್ (Myoglobin) ಎಂಬ ಪ್ರೋಟೀನ್‌ ಇರುತ್ತದೆ, ಇದು ಆಮ್ಲಜನಕವನ್ನು ಸಂಗ್ರಹಿಸುವ ಕೆಲಸ ಮಾಡುತ್ತದೆ. ಈ ಕಾರಣದಿಂದ ಈ ಮಾಂಸವು ಕಪ್ಪು ಅಥವಾ ಕೆಂಪು ಬಣ್ಣದಲ್ಲಿರುತ್ತದೆ. ಡಾರ್ಕ್ ಮಸಲ್‌ನಲ್ಲಿ ಮೈಟೋಕಾಂಡ್ರಿಯಾ ಎಂಬ ಶಕ್ತಿನಿರ್ಮಾಣ ಘಟಕಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಇವು ಮೀನುಗಳಿಗೆ ದೀರ್ಘಕಾಲದ ಶಕ್ತಿ ನೀಡುವ ಕಾರ್ಯ ಮಾಡುತ್ತವೆ.

ಡಾರ್ಕ್ ಮಸಲ್‌ಲಾಭವೇನು?

ಮೀನುಗಳು ವೇಗವಾಗಿ ಜಿಗಿಯಲು ಅಥವಾ ಬೇಟೆಯಾಡಲು ಬಿಳಿ ಸ್ನಾಯುಗಳನ್ನು ಬಳಸುತ್ತವೆ. ಆದರೆ ದೀರ್ಘ ದೂರದ ಈಜು ಅಥವಾ ಸ್ಥಿರವಾದ ಚಲನೆಗೆ ಡಾರ್ಕ್ ಮಸಲ್ ಉಪಯೋಗವಾಗುತ್ತದೆ. ಟ್ಯೂನ, ಮ್ಯಾಕರೆಲ್ ಹಾಗೂ ಸಾಲ್ಮನ್‌ ತರಹದ ದೂರ ಈಜುವ ಮೀನುಗಳಲ್ಲಿ ಡಾರ್ಕ್ ಮಸಲ್ ಹೆಚ್ಚು ಪ್ರಮಾಣದಲ್ಲಿರುತ್ತದೆ. ಸಣ್ಣ ಮೀನುಗಳಲ್ಲಿ ಇದು ಅಷ್ಟಾಗಿ ಗೋಚರಿಸುವುದಿಲ್ಲ.

ಇದ್ರಲ್ಲಿದೆ ಅದ್ಬುತ ಪೌಷ್ಟಿಕ ಮೌಲ್ಯ:

ಡಾರ್ಕ್ ಮಸಲ್ ಸಾಮಾನ್ಯ ಬಿಳಿ ಮಾಂಸದಿಗಿಂತ ಹೆಚ್ಚು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಈ ಕೊಬ್ಬಿನಾಮ್ಲಗಳು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಬಹುಮುಖ್ಯವಾದವು. ಇವುಗಳಲ್ಲಿ ಕೊಬ್ಬಿನ ಅಂಶ ಅಧಿಕವಾಗಿದ್ದು, ಮೀನುಗಳ ಶಕ್ತಿಯ ಸಂಗ್ರಹವಾಗಿ ಕೆಲಸ ಮಾಡುತ್ತದೆ. ಜೊತೆಗೆ ಡಾರ್ಕ್ ಮಾಂಸದಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಪ್ರಮಾಣವೂ ಹೆಚ್ಚಿರುತ್ತದೆ. ಪೌಷ್ಟಿಕ ದೃಷ್ಟಿಯಿಂದಲೂ ಈ ಭಾಗವು ಬಹಳ ಆರೋಗ್ಯಕರವಾಗಿದೆ.

Fresh salmon steak with a variety of seafood and herbs. On black rustic background

ತಿನ್ನಲು ಎಷ್ಟು ಸುರಕ್ಷಿತ?

ಅನೇಕರು ಡಾರ್ಕ್ ಮಸಲ್ ತಿನ್ನುವುದು ಸುರಕ್ಷಿತವೇ ಎಂದು ಅನುಮಾನಿಸುತ್ತಾರೆ. ವಾಸ್ತವದಲ್ಲಿ ಇದು ಮೀನಿನ ನೈಸರ್ಗಿಕ ಭಾಗವಾಗಿದ್ದು, ಸುರಕ್ಷಿತವಾಗಿ ತಿನ್ನಬಹುದಾದದ್ದು. ಆದರೆ ಡಾರ್ಕ್ ಮಸಲ್‌ನಲ್ಲಿರುವ ಕೊಬ್ಬಿನ ಅಂಶ ಹೆಚ್ಚು ಇರುವುದರಿಂದ ಇದು ಬಿಳಿ ಮಾಂಸದಿಗಿಂತ ಬೇಗನೆ ಹಾಳಾಗುವ ಸಾಧ್ಯತೆ ಇದೆ. ಇದನ್ನು “ಲಿಪಿಡ್ ಆಕ್ಸಿಡೀಕರಣ” ಎಂದು ಕರೆಯಲಾಗುತ್ತದೆ.

ಹಾಳಾಗಿರುವ ಲಕ್ಷಣಗಳಿವು:

ಮಾಂಸದಲ್ಲಿ ಹುಳಿ ಅಥವಾ ಅಮೋನಿಯಾ ತರಹದ ವಾಸನೆ ಬಂದರೆ ತಿನ್ನಬಾರದು. ಮಾಂಸ ಸ್ಪರ್ಶಕ್ಕೆ ಜಿಗುಟಾದರೆ ಅಥವಾ ಲೋಳೆಯಂತೆ ಕಂಡುಬಂದರೆ, ಅದನ್ನು ಎಸೆಯಬೇಕು.ಬಣ್ಣ ಕಂದು ಅಥವಾ ಬೂದು ಬಣ್ಣದಿಂದ ಹಸಿರು ಬಣ್ಣಕ್ಕೆ ಬದಲಾಗಿದ್ದರೆ, ಅದು ಹಾಳಾಗಿದೆ ಎಂದರ್ಥ. ಮೀನು ದೀರ್ಘಕಾಲ ಫ್ರಿಜ್‌ನ ಹೊರಗೆ ಇಟ್ಟಿದ್ದರೆ, ಡಾರ್ಕ್ ಮಸಲ್ ಭಾಗ ಬೇಗನೆ ಕೆಟ್ಟಿಹೋಗುತ್ತದೆ.

ಮಾನವರ ಸ್ನಾಯುಗಳ ಜೊತೆ ಹೋಲಿಕೆ

ಮೀನಿನಲ್ಲಿರುವ ಡಾರ್ಕ್ ಮತ್ತು ಬಿಳಿ ಸ್ನಾಯುಗಳ ನಡುವಿನ ವ್ಯತ್ಯಾಸವನ್ನು ಮಾನವರ ಸ್ನಾಯುಗಳಿಗೂ ಹೋಲಿಸಬಹುದು. ನಮ್ಮ ದೇಹದಲ್ಲಿಯೂ ವೇಗವಾಗಿ ಸೆಳೆತಗೊಳ್ಳುವ ಹಾಗೂ ನಿಧಾನವಾಗಿ ಸೆಳೆತಗೊಳ್ಳುವ ಸ್ನಾಯುಗಳು ಇವೆ. ವೇಗವಾಗಿ ಕಾರ್ಯನಿರ್ವಹಿಸುವ ಸ್ನಾಯುಗಳು ಬೇಗನೆ ಶಕ್ತಿಯನ್ನು ಬಳಸುತ್ತವೆ, ನಿಧಾನವಾದವು ದೀರ್ಘಕಾಲ ಶಕ್ತಿಯುತವಾಗಿರುತ್ತವೆ.