ಮೊದಲ ಟಿ ಟ್ವೆಂಟಿ: ಆಸೀಸ್ ಗೆ 162 ರನ್ ಗಳ ಗುರಿ ನೀಡಿದ ಭಾರತ

ಮನುಕಾ ಓವಲ್‌: ಇಲ್ಲಿ ನಡೆದ ಆಸ್ಟ್ರೇಲಿಯಾದ ಎದುರಿನ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಆರಂಭಿಕ ಆಟಗಾರ ಕೆಎಲ್ ರಾಹುಲ್ (51) ಅರ್ಧಶತಕ ಹಾಗೂ ಕೊನೆಯ ಹಂತದಲ್ಲಿ ರವೀಂದ್ರ ಜಡೇಜ (44*) ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 161 ಮೊತ್ತವನ್ನು ಭಾರತ ಕಲೆ ಹಾಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಮ್ ಇಂಡಿಯಾದ ಆರಂಭ ಉತ್ತಮವಾಗಿರಲಿಲ್ಲ. ಏಕದಿನ ಸರಣಿಯಲ್ಲಿ ಉತ್ತಮ ನಿರ್ವಹಣೆ ನೀಡಿದ ಅನುಭವಿ ಶಿಖರ್ ಧವನ್‌ ಕೇವಲ ಒಂದು ರನ್ ಗೆ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು.

ನಾಯಕ ವಿರಾಟ್ ಕೊಹ್ಲಿಗೂ (9) ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಇನ್ನೊಂದೆಡೆ ಐಪಿಎಲ್‌ನ ಉತ್ತಮ ಫಾರ್ಮ್ ಮುಂದುವರಿಸಿದ ಕೆಎಲ್ ರಾಹುಲ್, ವಿಕೆಟ್‌ನ ಮತ್ತೊಂದು ತುದಿಯಿಂದ ತಂಡಕ್ಕೆ ಆಸರೆಯಾದರು. ಇವರಿಗೆ ಸಂಜು ಸ್ಯಾಮ್ಸನ್ ಸಾಥ್ ನೀಡಿದರು.

ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ರಾಹುಲ್-ಸಂಜು ಜೋಡಿ ಕ್ರೀಸಿನಲ್ಲಿದ್ದಾಗ ಉತ್ತಮ ಮೊತ್ತ ಪೇರಿಸುವ ಭರವಸೆ ಮೂಡಿಸಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸಿದ ಮೊಯಿಸೆಸ್ ಹೆನ್ರಿಕ್ಸ್ ಆಘಾತ ನೀಡಿದರು.

ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ 15 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 23 ರನ್ ಗಳಿಸಿದರು.  ಇದಾದ ಬೆನ್ನಲ್ಲೇ ಮನೀಷ್ ಪಾಂಡೆ (2) ಅವರಿಗೆ ಆ್ಯಡಂ ಜಂಪಾ ಪೆವಿಲಿಯನ್ ಹಾದಿ ತೋರಿಸಿದರು. 15 ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ 16 ರನ್ ಗಳಿಸಿ ಔಟಾದರು.

ಕೊನೆಯ ಹಂತದಲ್ಲಿ ರವೀಂದ್ರ ಜಡೇಜ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಲು ನೆರವಾದರು. 23 ಎಸೆತಗಳನ್ನು ಎದುರಿಸಿದ ಜಡೇಜ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 44 ರನ್ ಗಳಿಸಿ ಅಜೇಯರಾಗುಳಿದರು. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ 7 ರನ್ ಗಳಿಸಿದರು.

ಆಸೀಸ್ ಪರ ಮೊಯಿಸೆಸ್ ಹೆನ್ರಿಕ್ಸ್ ಮೂರು ಮತ್ತು ಮಿಚೆಲ್ ಸ್ಟಾರ್ಕ್ ಎರಡು ವಿಕೆಟ್ ಕಬಳಿಸಿ ಮಿಂಚಿದರು.