ಬೆಂಗಳೂರು: 2021-22ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ, ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪಠ್ಯಕ್ರಮದಲ್ಲಿ ಹಾಗೂ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಯನ್ನು ದಿನಾಂಕ 17-02-2022 ರಿಂದ 25-03-2022ರವರೆಗೆ ನಡೆಸಲು ನಿಗದಿಪಡಿಸಲಾಗಿದೆ. ಪೂರ್ವ ಸಿದ್ಧತಾ ಪರೀಕ್ಷೆಯನ್ನು ದಿನಾಂಕ 14-03-2022 ರಿಂದ 25-03-2022ರವರೆಗೆ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಪರೀಕ್ಷೆಗಳನ್ನು ನಡೆಸಲು ದಿನಾಂಕಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 16-04-2022 ರಿಂದ 04-05-2022ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸೋದಕ್ಕೆ 18-01-2022ರಿಂದ 01-02-2022ರವರೆಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು [email protected] ಇ-ಮೇಲ್ ಗೆ ಕಳಿಸುವಂತೆ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಲಿದ್ದು, ಪ್ರಸ್ತುತ ಇರುವ ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಹಾಗೂ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ನಂತರ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ದಾಖಲಾಗಿ ಭವಿಷ್ಯ ರೂಪಿಸಿಕೊಳ್ಳೋ ನಿಟ್ಟಿನಲ್ಲಿ ಈ ಕೆಳಕಂಡಂತೆ ಬದಲಾವಣೆ ಮಾಡಲಾಗಿದೆ.
ಭಾಷಾ ವಿಷಯಗಳಲ್ಲಿ 2020-21ನೇ ಸಾಲಿನಲ್ಲಿ ಕಡಿತಗೊಳಿಸಲಾಗಿದ್ದು, ಶೆ.30ರಷ್ಟು ಪಠ್ಯಕ್ರಮಗಳನ್ನು 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಭಾಷಾ ವಿಷಯಗಳಲ್ಲಿ ಶೇ.30ರಷ್ಟು ಪಠ್ಯಕ್ರಮಗಳನ್ನು ಕಡಿತಗಒಳಿಸಿದ್ದು, ಶೇ.70ರಷ್ಟು ಪಠ್ಯಕ್ರಮಕ್ಕೆ ಮಾತ್ರ ಪರೀಕ್ಷೆ ನಡೆಸಲಾಗುವುದು.
2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಐಚ್ಛಿಕ ವಿಷಯಗಳ ಪಠ್ಯಕ್ರಮದಲ್ಲಿ ಯಾವುದೇ ಕಡಿತವಿಲ್ಲ. ಶೇ.100ರಷ್ಟು ಪಠ್ಯಕ್ರಮಕ್ಕೆ ಪರೀಕ್ಷೆಗಳು ನಡೆಯಲಿದೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಐಚ್ಛಿಕ ವಿಷಯಗಳಲ್ಲಿ ಪ್ರಶ್ನೆಪತ್ರಿಕೆ ತಯಾರಿಸುವಾಗ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆ ಪ್ರಶ್ನೆಗಳನ್ನು ನೀಡಿ ವಿದ್ಯಾರ್ಥಿಗಳು ತಮಗೆ ತಿಳಿದಿರುವ ಪ್ರಶ್ನೆಗಳನ್ನು ಆರಿಸಿಕೊಂಡು ಉತ್ತರಿಸೋ ಅವಕಾಶ ಕಲ್ಪಿಸಲಾಗಿದೆ.
2021-22ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಆಯಾ ಜಿಲ್ಲೆಯ ಉಪ ನಿರ್ದೇಶಕರ ನೇತೃತ್ವದಲ್ಲಿ ಸಿದ್ಧಪಡಿಸಿ, ದಿನಾಂಕ 28-03-2022 ರಿಂದ 13-04-2022ರವರೆಗೆ ನಡೆಸಲು ದಿನಾಂಕ ನಿಗದಿ ಪಡಿಸಲಾಗಿದೆ.
ಪ್ರಥಮ ಪಿಯುಸಿ ಭಾಷಾ ವಿಷಯಗಳಲ್ಲಿ 2020-21ನೇ ಸಾಲಿನಲ್ಲಿ ಕಡಿತಗೊಳಿಸಲಾಗಿದ್ದ ಶೇ.30ರಷ್ಟು ಪಠ್ಯಕ್ರಮವನ್ನು 2021-22ನೇ ಸಾಲಿನಲ್ಲಿಯೂ ಕಡಿತಗೊಳಿಸಲಾಗಿದೆ. ಐಚ್ಛಿಕ ವಿಷಯಗಳಲ್ಲಿ ಶೇ.100ರಷ್ಟು ಪಠ್ಯಕ್ರಮಕ್ಕೆ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.