ಉಜ್ಜಯಿನಿ ಮಹಾಕಾಲೇಶ್ವರ ಮಂದಿರ ಕಾರಿಡಾರ್ ಅಭಿವೃದ್ದಿ ಯೋಜನೆಯ ಮೊದಲನೆ ಹಂತ ಪೂರ್ಣ: ಮಂತ್ರಮುಗ್ದಗೊಳಿಸುವ ಮಂದಿರದ ಮೊದಲ ನೋಟ

ಭೋಪಾಲ್: ಉಜ್ಜಯಿನಿಯಲ್ಲಿ 750 ಕೋಟಿ ರೂಪಾಯಿ ವೆಚ್ಚದ ಮಹಾಕಾಲೇಶ್ವರ ದೇವಸ್ಥಾನ ಕಾರಿಡಾರ್ ಅಭಿವೃದ್ಧಿ ಯೋಜನೆಯ ಮೊದಲ ಹಂತವನ್ನು ಅಕ್ಟೋಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ತಿಳಿಸಿದ್ದಾರೆ.

ಸಂಪೂರ್ಣ ಕಾಮಗಾರಿಯನ್ನು ಪರಿಶೀಲಿಸಿದ ಚೌಹಾಣ್, ಮೊದಲ ಹಂತವನ್ನು 316 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಹಾಕಾಲೇಶ್ವರ ಕಾರಿಡಾರ್‌ನ ಮೊದಲ ಹಂತದ ಭಾಗವಾಗಿ ಅಭಿವೃದ್ಧಿ ಪಡಿಸಿದ ಮೂಲಸೌಕರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 11 ರಂದು ದೇಶಕ್ಕೆ ಸಮರ್ಪಿಸಲಿದ್ದಾರೆ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಿಶ್ ಕುಮಾರ್ ಪಾಠಕ್ ಮಾತನಾಡಿ, 316 ಕೋಟಿ ರೂ.ಗಳ ಮೊದಲ ಹಂತವು ಮಧ್ಯ ದಾರಿ ವಲಯ, ಉದ್ಯಾನವನ, ಕಾರು ಮತ್ತು ಬಸ್‌ಗಳಿಗೆ ಬಹುಮಹಡಿ ಪಾರ್ಕಿಂಗ್, ಸೌರ ದೀಪ, ಯಾತ್ರಾರ್ಥಿಗಳಿಗೆ ಸೌಲಭ್ಯ ಕೇಂದ್ರ, ಬೃಹತ್ ಪ್ರವೇಶ ದ್ವಾರ, ನರಸಿಂಗ್ ಘಾಟ್ ರಸ್ತೆ, ನೀರಿನ ಪೈಪ್ ಲೈನ್, ಒಳಚರಂಡಿ ಮಾರ್ಗ ಸೇರಿದಂತೆ ಇತರೆ ಕಾಮಗಾರಿಗಳನ್ನು ಒಳಗೊಂಡಿದೆ. ಶಿವ ತಾಂಡವ ಶ್ಲೋಕಗಳನ್ನು ಪ್ರದರ್ಶಿಸುವ 108 ಸ್ತಂಭಗಳು ಮತ್ತು ವಿವಿಧ ಕಥೆಗಳನ್ನು ಬಿಂಬಿಸುವ 52 ಭಿತ್ತಿಚಿತ್ರ, ಜೊತೆಗೆ ಬೆಳಕು ಮತ್ತು ಧ್ವನಿ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.

ಮಹಾಕಾಲೇಶ್ವರ ಮಂದಿರವು ದೇಶದ 12 ‘ಜ್ಯೋತಿರ್ಲಿಂಗ’ಗಳಲ್ಲಿ ಒಂದಾಗಿದೆ ಮತ್ತು ವರ್ಷವಿಡೀ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ.