ಇಂಗ್ಲೆಂಡ್​-ನ್ಯೂಜಿಲೆಂಡ್​ ನಡುವೆ ಮೊದಲ ಪಂದ್ಯ : ಅಹಮದಾಬಾದ್‌ನಲ್ಲಿ ವಿಶ್ವಕಪ್ ಕ್ರಿಕೆಟ್‌​ ಉದ್ಘಾಟನೆ

2019ರ ವಿಶ್ವಕಪ್​ ಗೆದ್ದ ಆಂಗ್ಲರ ಪಡೆ ಬಲಿಷ್ಠವಾಗಿದೆ. ಹಾಗೆಯೇ ಅದನ್ನೆದುರಿಸಲು ಕಿವೀಸ್​ ಪಡೆ ಸಕಲ ರೀತಿಯಲ್ಲೂ ಸನ್ನದ್ಧವಾಗಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ನಾಯಕ ವಿಲಿಯಮ್ಸನ್​ ಕಿವೀಸ್​ ಬಲ. ಅತ್ತ ನಿವೃತ್ತಿಯನ್ನು ವಿಶ್ವಕಪ್​ಗಾಗಿ ವಾಪಸ್ ಪಡೆದ ಸ್ಟೋಕ್ಸ್​ ಅವರಿಗೆ ಗಾಯವಾಗಿರುವುದು ಆಂಗ್ಲರಿಗೆ ನೆಗೆಟಿವ್​ ಆಗಿದೆ. ಈ ಎಲ್ಲದರ ನಡುವೆ ಉದ್ಘಾಟನಾ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಲಿದೆ.

ಅಹಮದಾಬಾದ್ (ಗುಜರಾತ್): ನಾಳೆ ಗುಜರಾತ್‌ನ​ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ಸೆಣಸಾಟದಿಂದ ವಿಶ್ವಕಪ್ ಕ್ರಿಕೆಟ್‌ಗೆ​ ಚಾಲನೆ ಸಿಗಲಿದೆ.2023ರ ವಿಶ್ವಕಪ್​ನ ಮೊದಲ ಪಂದ್ಯ ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ನಡುವೆ ನಡೆಯಲಿದೆ.

2015 ಮತ್ತು 2019ರಲ್ಲಿ ರನ್ನರ್​ ಅಪ್​ ಆಗಿದ್ದ ಕಿವೀಸ್​ ತಂಡ ಈ ಬಾರಿ ವಿಶ್ವಕಪ್ ಗೆಲ್ಲಲೇ ಬೇಕೆಂಬ ಹಟದಲ್ಲಿದೆ. ಅದೇ ರೀತಿ ತನ್ನಲ್ಲಿಯೇ ವಿಶ್ವಕಪ್​ ಟ್ರೋಫಿ ಉಳಿಸಿಕೊಳ್ಳಬೇಕೆಂಬ ಹಂಬಲದಲ್ಲಿ ಇಂಗ್ಲೆಂಡ್​ ಮೈದಾನಕ್ಕಿಳಿಯಲಿದೆ. ಮಹಾ ಸಮರದ ಮೊದಲ ಕದನವನ್ನು ಜಯದಿಂದ ಆರಂಭಿಸಲು ಉಭಯ ತಂಡಗಳು ಲೆಕ್ಕಾಚಾರದಲ್ಲಿಲೆ. 2019 ವಿಶ್ವಕಪ್​ ಸೋಲಿನ ಸೇಡು ತೀರಿಸಲು ಕಿವೀಸ್​ ಉತ್ಸಾಹದಲ್ಲಿದೆ.

ಸ್ಟೋಕ್ಸ್​ ಹೊರತಾಗಿಯೂ ಆಂಗ್ಲರು ಬಲಿಷ್ಠ: ಮೆಕಲಮ್​ ಕೋಚ್​ ಆಗಿ ಬಂದ ನಂತರ ಇಂಗ್ಲೆಂಡ್​ ತಂಡ ಬ್ಯಾಟಿಂಗ್​ ವೇಗ ಹೆಚ್ಚಾಗಿದೆ. ಜಾನಿ ಬೈರ್​ಸ್ಟೋ ಮತ್ತು ಡೇವಿಡ್ ಮಲನ್ ಸ್ಫೋಟಕ ಆರಂಭವನ್ನು ನೀಡಿದರೆ ಜೋ ರೂಟ್​, ಹ್ಯಾರಿ ಬ್ರೂಕ್​, ಬಟ್ಲರ್ ಮಧ್ಯಮದ ಬಲವಾಗಿದ್ದಾರೆ. ಲಿಯಾಮ್ ಲಿವಿಂಗ್‌ ಸ್ಟೋನ್ ಮತ್ತು ಮೊಯಿನ್​ ಅಲಿ ಬ್ಯಾಟಿಂಗ್​ ಆಲ್​ರೌಂಡರ್​ಗಳಾಗಿ ತಂಡಕ್ಕೆ ಕೊಡುಗೆ ನೀಡುತ್ತಾರೆ. ಸ್ಯಾಮ್ ಕರನ್, ಕ್ರಿಸ್​ವೋಕ್ಸ್​, ಮಾರ್ಕ್​ ವುಡ್​ ವೇಗದ ಬೌಲಿಂಗ್​ನಲ್ಲಿ ಕಿವೀಸ್​ಗೆ ಕಂಟಕವಾದರೆ, ಲಿವಿಂಗ್​ಸ್ಟೋನ್ ಮತ್ತು ಮೊಯಿನ್ ಅಲಿ ಸಹಕಾರ ನೀಡಲಿದ್ದಾರೆ.

ಕಿವೀಸ್​ ವೇಗಿ ಸೌಥಿ ಅಲಭ್ಯ: ನ್ಯೂಜಿಲೆಂಡ್​ನ ಪ್ರಮುಖ ವೇಗಿ ಟಿಮ್​ ಸೌಥಿ ನಾಳಿನ ಪಂದ್ಯದಲ್ಲಿ ಆಡುತ್ತಿಲ್ಲ. ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಸೌಥಿ ಗಾಯಕ್ಕೆ ತುತ್ತಾಗಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇನ್ನೂ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ. ಅಭ್ಯಾಸ ಪಂದ್ಯದ ವೇಳೆ ಗಾಯಕ್ಕೆ ತುತ್ತಾದ ನಾಯಕ ವಿಲಿಯಮ್ಸ​ನ್​ ಚೇತರಿಸಿಕೊಂಡಿದ್ದಾರೆ. ಹೀಗಾಗಿ ನಾಯಕ ಸಂಪೂರ್ಣ ಚೇತರಿಸಿಕೊಳ್ಳದಿದ್ದರೂ ಮೈದಾನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಮೊದಲ ಪಂದ್ಯಕ್ಕೆ ಸ್ಟೋಕ್ಸ್​ ಅಲಭ್ಯ: ಏಕದಿನ ಕ್ರಿಕೆಟ್​ ನಿವೃತ್ತಿ ಘೋಷಿಸಿದ್ದ ಬೆನ್​ ಸ್ಟೋಕ್ಸ್​ ಅವರನ್ನು ವಿಶ್ವಕಪ್​ ಉದ್ದೇಶದಿಂದ ತಂಡಕ್ಕೆ ಮತ್ತೆ ಕರೆಯಲಾಗಿತ್ತು. 2019 ವಿಶ್ವಕಪ್​ ಗೆಲುವಿನಲ್ಲಿ ಆಲ್​ರೌಂಡರ್​ ಆಗಿ ಪ್ರಮುಖ ಪಾತ್ರವನ್ನೂ ವಹಿಸಿದ್ದರು. ಇಂಗ್ಲೆಂಡ್​ನ ದುರಾದೃಷ್ಟಕ್ಕೆ ಗಾಯಗೊಂಡಿರುವ ಸ್ಟೋಕ್ಸ್​ ನಾಳಿನ ಪಂದ್ಯಕ್ಕೆ ಅಲಭ್ಯರು. ಸ್ಟೋಕ್ಸ್​ ಅಭ್ಯಾಸದ ವೇಳೆ ಸೊಂಟದ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಹಾಗಾಗಿ ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಅಹಮದಾಬಾದ್‌​ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಬಟ್ಲರ್​ ಸ್ಪಷ್ಟಪಡಿಸಿದ್ದಾರೆ.

ಸಂಭಾವ್ಯ ತಂಡಗಳು: ಇಂಗ್ಲೆಂಡ್​: ಜೋಸ್​ ಬಟ್ಲರ್ (ನಾಯಕ), ಡೇವಿಡ್ ಮಲನ್, ಜಾನಿ ಬೈರ್​ಸ್ಟೋ, ಜೋ ರೂಟ್​, ಹ್ಯಾರಿ ಬ್ರೂಕ್​, ಲಿಯಾಮ್ ಲಿವಿಂಗ್‌ ಸ್ಟೋನ್, ಮೊಯಿನ್​ ಅಲಿ, ಸ್ಯಾಮ್ ಕರನ್, ಕ್ರಿಸ್​ ವೋಕ್ಸ್​, ಆದಿಲ್ ರಶೀದ್, ಮಾರ್ಕ್​ ವುಡ್​.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೆ, ವಿಲ್​ ಯಂಗ್​, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್, ಮಾರ್ಕ್​ ಚಾಪ್ನನ್​, ಗ್ಲೆನ್ ಫಿಲಿಪ್ಸ್, ಮಿಚೆಲ್​ ಸ್ಯಾಂಟ್ನರ್, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ.

ಪಂದ್ಯ: ನಾಳೆ ಮಧ್ಯಾಹ್ನ 2ಕ್ಕೆ ನರೇಂದ್ರ ಮೋದಿ ಕ್ರೀಡಾಂಗಣದಿಂದ ನೇರಪ್ರಸಾರ. ಸ್ಟಾರ್​ ಸ್ಪೋರ್ಟ್ಸ್​ ಮತ್ತು ಹಾಟ್​ಸ್ಟಾರ್​ನಲ್ಲಿ ವೀಕ್ಷಣೆಗೆ ಲಭ್ಯ.ಬಲಿಷ್ಠ ಬ್ಯಾಟಿಂಗ್​: ಪಾಕಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕಿವೀಸ್​ ಬ್ಯಾಟಿಂಗ್​ ಬಲದ ಒಂದು ಝಲಕ್​ ಎಲ್ಲರೂ ಕಂಡಿದ್ದಾರೆ. ಡೆವೊನ್ ಕಾನ್ವೆ ಮತ್ತು ವಿಲ್ ಯಂಗ್ ಬಿರುಸಿನ ಆರಂಭ ನೀಡುತ್ತಾರೆ. ನಾಯಕ ಕೇನ್ ವಿಲಿಯಮ್ಸನ್​ ಮೂರನೇ ಕ್ರಮಾಂಕಕ್ಕೆ ಬಲ ತುಂಬಿದರೆ, ಮಧ್ಯಮ ಕ್ರಮಾಂಕದಲ್ಲಿ ಡೇರಿಲ್ ಮಿಚೆಲ್, ಮಾರ್ಕ್​ ಚಾಪ್​ಮನ್​​, ಟಾಮ್ ಲಾಥಮ್, ಗ್ಲೇನ್​ ಫಿಲಿಫ್ಸ್​ ಅವರನ್ನೊಳಗೊಂಡ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಲಾಕಿ ಫರ್ಗ್ಯೂಸನ್​, ಮ್ಯಾಟ್​ ಹೆನ್ರಿ ಮತ್ತು ಟ್ರೆಂಟ್​ ಬೋಲ್ಟ್​​ ಬೌಲಿಂಗ್​​​​ ಮಾರಕವಾಗಲಿದ್ದಾರೆ. ಮಿಚೆಲ್ ಸ್ಯಾಂಟ್ನರ್​ ಸ್ಪಿನ್ ಮೂಲಕ ಇಂಗ್ಲೆಂಡ್​ಗೆ ಕಾಡಲು ರೆಡಿಯಾಗಿದ್ದಾರೆ.