ಮಣಿಪಾಲ: ಅಕ್ಯೂಟ್ ಮೈಲೋಯ್ಡ್ ಲ್ಯುಕೇಮಿಯಾ (ಒಂದು ರೀತಿಯ ರಕ್ತದ ಕ್ಯಾನ್ಸರ್) ರೋಗ ಪತ್ತೆಯಾದ 12 ವರ್ಷದ ಬಾಲಕನಿಗೆ ಮೊದಲ ಅರ್ಧ- ಹೊಂದಾಣಿಕೆಯ ಅಸ್ಥಿಮಜ್ಜೆಯ ಕಸಿಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಅಸ್ಥಿ ಮಜ್ಜೆಯ ಕಸಿಯು ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗಳ ತಜ್ಞ ತಂಡದಿಂದ ಮಾಡಲ್ಪಡುವ ಒಂದು ಸಂಕೀರ್ಣ ವೈದ್ಯಕೀಯ ಚಿಕಿತ್ಸೆಯಾಗಿದ್ದು, ಇದು ಕ್ಯಾನ್ಸರ್ ಯುಕ್ತ ಅಸ್ಥಿ ಮಜ್ಜೆಯನ್ನು ನಿರ್ಮೂಲನೆ ಮಾಡಿ, ಆರೋಗ್ಯಕರ ಅಸ್ಥಿ ಮಜ್ಜೆಯ ಕೋಶಗಳನ್ನು ವರ್ಗಾಹಿಸುವ ಪ್ರಕ್ರಿಯೆಯಾಗಿದೆ. ರೋಗಿಗೆ ಅಸ್ಥಿ ಮಜ್ಜೆಯನ್ನು ದಾನ ಮಾಡಲು ಪೂರ್ಣ ಎಚ್ ಎಲ್ ಎ ಹೊಂದಾಣಿಕೆಯ ದಾನಿಯನ್ನು ಆಯ್ಕೆ ಮಾಡಲಾಗುತ್ತದೆ.
ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ಎಂ.ವಿ ಮಾತನಾಡಿ, “ಅಸ್ಥಿ ಮಜ್ಜೆಯ ಕಸಿ ಮಾಡುವುದರಿಂದ ಈ ಹಿಂದೆ ಗುಣಪಡಿಸಲಾಗದ ಕಾಯಿಲೆಗಳಿಗೆ ಚಿಕಿತ್ಸೆ ದೊರಕಿದೆ ಮತ್ತು ಇದು ಅನೇಕ ರೋಗಿಗಳ ಜೀವನವನ್ನು ಬದಲಾಯಿಸಿದೆ. ಅಸ್ಥಿ ಮಜ್ಜೆಯ ಕಸಿಯು ಕೆಂಪು ರಕ್ತ ಕಣಗಳ ಅಸ್ವಸ್ಥತೆಗಳು (ಥಲಸ್ಸೆಮಿಯಾ), ಅಸ್ತಿ ಮಜ್ಜೆಯ ವೈಫಲ್ಯ, ಇಮ್ಯುನೊ ಡಿಫಿಷಿಯನ್ಸಿ ಮತ್ತು ಕೆಲವು ವಿಧದ ಕ್ಯಾನ್ಸರ್ ರೋಗಗಳನ್ನು ಶಾಶ್ವತವಾಗಿ ಗುಣಪಡಿಸುವ ಚಿಕಿತ್ಸೆಯಾಗಿದೆ” ಎಂದರು.
ಮಗುವಿನ ಅಸ್ಥಿಮಜ್ಜೆಗೆ ಪೂರ್ಣ ಎಚ್ಎಲ್ಎ ಹೊಂದಾಣಿಕೆಯ ದಾನಿಯು ಲಭ್ಯವಿರಲಿಲ್ಲ ಹಾಗೂ ದಾನಿಯನ್ನು ಹುಡುಕಲು ಹೆಚ್ಚು ಸಮಯ ಇರಲಿಲ್ಲವಾದ್ದರಿಂದ, ಪರ್ಯಾಯವಾಗಿ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ವೈದ್ಯರ ತಂಡವು ಮಗುವನ್ನು ಉಳಿಸುವ ವಿಶಿಷ್ಟವಾದ ಅರ್ಧ ಎಚ್ಎಲ್ಎ ಹೊಂದಾಣಿಕೆಯ ಅಸ್ಥಿಮಜ್ಜೆಯ ಕಸಿ ಮಾಡಲು ನಿರ್ಧರಿಸಿ, ರೋಗಿಯ ಸಹೋದರಿ (9 ವರ್ಷ ), ಕೇವಲ 50% ಎಚ್ಎಲ್ಎ ಹೊಂದಿಕೆಯಾಗುವ ಅಸ್ಥಿ ಮಜ್ಜೆಯ ಕಸಿಯನ್ನು ನಡೆಸಿ ಚಿಕಿತ್ಸೆ ನೀಡಲಾಯಿತು.
ರೋಗಿಯನ್ನು 6 ವಾರಗಳ ಕಾಲ ವಿಶೇಷ ಅಸ್ಥಿ ಮಜ್ಜೆಯ ಕಸಿ ಮಾಡುವಿಕೆ ಘಟಕದಲ್ಲಿಟ್ಟು, ನಂತರ ಆರೋಗ್ಯ ಸ್ಥಿರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಅರ್ಧ-ಹೊಂದಾಣಿಕೆಯ ಅಸ್ಥಿ ಮಜ್ಜೆಯ ಕಸಿ ಯಶಸ್ವಿಯಾಗಿದ್ದು, ಕಸಿ ಮಾಡಿ 7 ತಿಂಗಳುಗಳಾಗಿದ್ದು ಈಗ ರೋಗಿಯು ಕ್ಯಾನ್ಸರ್ ನಿಂದ ಮುಕ್ತರಾಗಿದ್ದಾರೆ ಮತ್ತು ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದರು.
ವಿಭಾಗದ ಮಕ್ಕಳ ಅಸ್ಥಿಮಜ್ಜೆ ಕಸಿ ತಜ್ಞ ಡಾ ವಿನಯ್ ಎಂ.ವಿ ಅವರು ಕಳೆದ 2 ದಶಕಗಳಲ್ಲಿ ಅಸ್ತಿ ಮಜ್ಜೆಯ ಕಸಿ ವಿಧಾನ ಬಹಳ ದೂರ ಸಾಗಿದೆ. ನವೀನ ತಂತ್ರಜ್ಞಾನಗಳು ಮತ್ತು ಸುಧಾರಿತ ಇಮ್ಯುನೊಸಪ್ರೆಸಿವ್ ಔಷಧಿಗಳು ಲಭ್ಯವಿರುವುದರಿಂದ, ಅರ್ಧ-ಹೊಂದಾಣಿಕೆಯ ಕಸಿ ಮಾಡುವಿಕೆಯು ಸಾಧ್ಯವಾಗಿದೆ ಎಂದು ಹೇಳಿದರು.
ನಮ್ಮ ಕರಾವಳಿ ಪ್ರದೇಶದಲ್ಲಿ ಯಶಸ್ವಿ ಹ್ಯಾಪ್ಲೋಐಡೆಂಟಿಕಲ್ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಗೆ ಒಳಗಾದ ಮೊದಲ ರೋಗಿ ಎಂದು ವಿಭಾಗದ ಮುಖ್ಯಸ್ಥರಾದ ಡಾ.ವಾಸುದೇವ ಭಟ್ ಕೆ ಮಾಹಿತಿ ನೀಡಿದರು.
ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ವೈದ್ಯರು , ರಕ್ತ ಕೇಂದ್ರ ಮತ್ತು ಶುಶ್ರೂಷಕರ ತಂಡದವರು ರಕ್ತದ ಕ್ಯಾನ್ಸರ್ ಹೊಂದಿರುವ ಮಗುವಿನ ಜೀವ ಉಳಿಸಲು ಜಂಟಿಯಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿ ಇಡೀ ತಂಡವನ್ನು ಅಭಿನಂದಿಸಲಾಯಿತು.












