ರೈಲು ಸಾರಿಗೆಗೆ ಟ್ವಿಸ್ಟ್ ಕೊಡಲಿದೆ ಈ ಹೈಡ್ರೋಜನ್ ಚಾಲಿತ ರೈಲು:ಶೀಘ್ರದಲ್ಲಿ ಭಾರತದಲ್ಲಿ ಸಂಚಾರ ಶುರು ಮಾಡೋ ಈ ರೈಲಲ್ಲಿ ಏನೇನಿದೆ?

ರೈಲು ತಂತ್ರಜ್ಞಾನದಲ್ಲಿ ಭಾರತ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದೆ. ವಿಶ್ವದ ಅಗ್ರಗಣ್ಯ ರೈಲು ರಾಷ್ಟ್ರಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ದೇಶದ ಮೊದಲ ಹಾಗೂ ವಿಶ್ವದ ಅತಿ ಉದ್ದದ ಹೈಡ್ರೋಜನ್ ಚಾಲಿತ ರೈಲು ಶೀಘ್ರದಲ್ಲೇ ಸಂಚಾರ ಆರಂಭಿಸಲಿದೆ. ಶಬ್ದ ಮತ್ತು ಮಾಲಿನ್ಯವಿಲ್ಲದ ಈ ರೈಲು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ.

ಈ ಹೈಡ್ರೋಜನ್ ರೈಲು ಹರಿಯಾಣದ ಜಿಂದ್–ಸೋನಿಪತ್ ಮಾರ್ಗದಲ್ಲಿ ಪ್ರಥಮವಾಗಿ ಸಂಚರಿಸಲಿದೆ. ಗಂಟೆಗೆ 110 ರಿಂದ 140 ಕಿಲೋಮೀಟರ್ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿರುವ ಈ ರೈಲು, ಪ್ರಯಾಣಿಕರಿಗೆ ಅತ್ಯಂತ ಆರಾಮದಾಯಕ ಅನುಭವ ಒದಗಿಸಲಿದೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ನಲ್ಲಿ ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನದಿಂದ ತಯಾರಾದ ಈ ರೈಲು, ಒಮ್ಮೆಲೇ 2,600ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಒಟ್ಟು 356 ಕಿಲೋಮೀಟರ್ ದೂರವನ್ನು ಕ್ರಮಿಸುವ ಈ ರೈಲು ದಿನಕ್ಕೆ ಎರಡು ಪ್ರಯಾಣಗಳನ್ನು ನಡೆಸಲಿದೆ.

ಅತ್ಯಾಧುನಿಕ ಸೌಲಭ್ಯಗಳ ಸಂಗಮ:
ಹೈಡ್ರೋಜನ್ ರೈಲಿನ ಕೋಚ್‌ಗಳು ಆಧುನಿಕ ಸೌಲಭ್ಯಗಳಿಂದ ತುಂಬಿವೆ. ತಾಪಮಾನ ಸಂವೇದಕಗಳು, ಸುಧಾರಿತ ವಾಶ್‌ಬೇಸಿನ್‌ಗಳು ಹಾಗೂ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ. ಆರಾಮದಾಯಕ ನೀಲಿ ಬಣ್ಣದ ಆಸನಗಳು, ಸುಧಾರಿತ ಸೀಲಿಂಗ್ ಫ್ಯಾನ್‌ಗಳು ಮತ್ತು ಎಲ್‌ಇಡಿ ಬೆಳಕು ವ್ಯವಸ್ಥೆ ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಸುಧಾರಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಬಲವಾದ ಹ್ಯಾಂಡ್‌ಗ್ರಿಪ್‌ಗಳನ್ನೂ ಒದಗಿಸಲಾಗಿದೆ.


ಸುಗಮ ಪ್ರವೇಶ ವ್ಯವಸ್ಥೆ
ಕೋಚ್‌ಗಳ ಮಧ್ಯಭಾಗದಲ್ಲಿ ಜಾರುವ ಬಾಗಿಲುಗಳಿದ್ದು, ಪ್ರಯಾಣಿಕರಿಗೆ ಸುಲಭ ಪ್ರವೇಶ ಕಲ್ಪಿಸುತ್ತವೆ. ನೆಲದಲ್ಲಿ ಲೋಹದ ಹಾಳೆಗಳನ್ನು ಬಳಸಿ ದೀರ್ಘಕಾಲಿಕ ಬಳಕೆಗೆ ಅನುಕೂಲ ಮಾಡಲಾಗಿದೆ. ಬಾಗಿಲುಗಳ ಬಳಿ ಉಕ್ಕಿನ ರೇಲಿಂಗ್ ಮತ್ತು ಸುರಕ್ಷತಾ ಗ್ರಿಲ್‌ ಅಳವಡಿಸಲಾಗಿದೆ. ಗಾಢ ನೀಲಿ–ಬಿಳಿ ಬಣ್ಣದ ಹೊರಾಂಗಣ ವಿನ್ಯಾಸ ರೈಲಿನ ಆಕರ್ಷಣೆಯನ್ನು ಹೆಚ್ಚಿಸಿದೆ.
ಚಾಲಕನ ಕ್ಯಾಬಿನ್ ಕೂಡ ಆಧುನಿಕ ಲೋಕೋ ಪೈಲಟ್‌ಗಳಿಗಾಗಿ ವಿನ್ಯಾಸಗೊಳಿಸಿದ ಚಾಲಕನ ಕ್ಯಾಬಿನ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಹೈಡ್ರೋಜನ್ ಮಟ್ಟ, ವೇಗ ಹಾಗೂ ತಾಂತ್ರಿಕ ಸ್ಥಿತಿಗತಿಗಳನ್ನು ತಕ್ಷಣ ತಿಳಿಸುವ ಡಿಜಿಟಲ್ ಡಿಸ್ಪ್ಲೇ, ಸ್ವಯಂಚಾಲಿತ ಬ್ರೇಕ್ ವ್ಯವಸ್ಥೆ, ತುರ್ತು ಸಂದರ್ಭಗಳಿಗೆ ಕೆಂಪು ಹ್ಯಾಂಡಲ್‌ಗಳು ಹಾಗೂ ಸುಧಾರಿತ ನಿಯಂತ್ರಣ ವ್ಯವಸ್ಥೆಗಳು ಕ್ಯಾಬಿನ್‌ನ ಪ್ರಮುಖ ವೈಶಿಷ್ಟ್ಯಗಳಾಗಿವೆ.