ಎಸ್‌ಎಂಎಸ್ ಪದವಿ ಪೂರ್ವ ಕಾಲೇಜು, ಬ್ರಹ್ಮಾವರದಲ್ಲಿ ಪ್ರಥಮ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ; ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಬ್ರಹ್ಮಾವರ: ಎಸ್ಎಂಎಸ್ ಪದವಿ ಪೂರ್ವ ಕಾಲೇಜು, ಬ್ರಹ್ಮಾವರದಲ್ಲಿ 2026–27ನೇ ಶೈಕ್ಷಣಿಕ ವರ್ಷದ ಪ್ರಥಮ ಪೋಷಕ-ಶಿಕ್ಷಕ ಸಂಘದ ಮಹಾಸಭೆ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಎಸ್‌ಎಂಎಸ್ ಕಮ್ಯುನಿಟಿ ಹಾಲ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಲಾರೆನ್ಸ್ ಫಾದರ್ ಉದ್ಘಾಟಿಸಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಶಿಸ್ತು ಮತ್ತು ಪರಿಶ್ರಮದ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕೆಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ಗ್ರೇಸ್ ಅಕಾಡೆಮಿಯ ಶ್ರೀ ಸುಬ್ರಮಣ್ಯ ಕುಳೆದು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕಲಿತ ವಿಷಯಗಳನ್ನು ಪರಿಣಾಮಕಾರಿಯಾಗಿ ನೆನಪಿಟ್ಟುಕೊಳ್ಳುವ ವಿಧಾನಗಳು, ಏಕಾಗ್ರತೆ, ನಿರಂತರ ಅಭ್ಯಾಸ ಹಾಗೂ ಜೀವನದಲ್ಲಿ ಯಶಸ್ಸಿನ ಉತ್ತುಂಗ ತಲುಪಲು ಅನುಸರಿಸಬೇಕಾದ ಮಾರ್ಗಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರನ್ನು ಸಮಾಜಶಾಸ್ತ್ರ ಉಪನ್ಯಾಸಕರಾದ ವಿಜಯ ಆಳ್ವ ಅವರು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಲಯನ್ ಐವನ್ ಡೋನಾತ್ ಸುವಾರಿಸ್ ಅವರು ಪೋಷಕರನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಹಾಗೂ ಅವರೊಂದಿಗೆ ನಿರಂತರ ಸಂಪರ್ಕದ ಮಹತ್ವವನ್ನು ವಿವರಿಸಿದರು.

ಪ್ರೌಢಶಾಲಾ ಕನ್ನಡ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯರಾದ ವಿಷ್ಣುದಾಸ್ ಉಪಾಧ್ಯ ಅವರು ವಂದನಾರ್ಪಣೆ ಸಲ್ಲಿಸಿದರು. ಉಪನ್ಯಾಸಕರಾದ ರಾಘವೇಂದ್ರ ಐತಾಳ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪಟ್ಟಿಯನ್ನು ಶ್ರೀಮತಿ ಅಕ್ಷತಾ ಅನಿಲ್ ಪೂಜಾರಿ ಹಾಗೂ ಶ್ರೀಮತಿ ಅನಿಷ ಡಿಸೋಜಾ ಅವರು ವಾಚಿಸಿದರು. ವಿದ್ಯಾರ್ಥಿ ಸಂಘದ ನೂತನ ಮುಖಂಡರಾದ ಮೊಹಮ್ಮದ್ ಸಾದ್ ಅಲಿಫ್ ಹಾಗೂ ಪ್ರಜ್ವಲ್ ಪೂಜಾರಿ ಅವರು ತಮ್ಮನ್ನು ಆಯ್ಕೆ ಮಾಡಿದ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಪದವಿ ಪೂರ್ವ ವಿಭಾಗದ ಖಜಾಂಜಿಯಾದ ಹೆರಿಕ್ ಡಿಸೋಜಾ, ಪ್ರೌಢಶಾಲಾ ವಿಭಾಗದ ಪಿಟಿಎ ಅಧ್ಯಕ್ಷರಾದ ಸಂತೋಷ್ ಭಂಡಾರಿ, ಪದವಿ ಪೂರ್ವ ವಿಭಾಗದ ಪಿಟಿಎ ಅಧ್ಯಕ್ಷರಾದ ಕೃಷ್ಣಮೂರ್ತಿ ಐತಾಳ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಕಾಲೇಜಿನ ಎಲ್ಲಾ ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.