ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮೊಟ್ಟ ಮೊದಲ ಸಂಚಾರಿ ಚಿತಾಗಾರ ಕಾರ್ಯಾಚರಣೆ

ಕುಂದಾಪುರ: ಇಲ್ಲಿನ ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರವು ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿರುವ ಹೆಣಸುಡುವ ಸಮಸ್ಯೆಗಳಿಗೆ ಮುಕ್ತಾಯ ಹಾಡುವ ನಿಟ್ಟಿನಲ್ಲಿ ಮುಂದಾಗಿದೆ. ಕುಂದಾಪುರ ಬೈಂದೂರು ವಿಧಾನಸಭಾ ಕ್ಷೇತ್ರದ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉಚಿತವಾಗಿ ಸಂಚಾರಿ ಚಿತಾಗಾರವನ್ನು ಒದಗಿಸಿಕೊಡುವ ಮೂಲಕ ರಾಜ್ಯದಲ್ಲೇ ಮೊಟ್ಟ ಮೊದಲ ಸಂಚಾರಿ ಚಿತಾಗಾರ ಒದಗಿಸಿದ ಸಂಘ ಎನ್ನುವ ಕೀರ್ತಿಗೆ ಪಾತ್ರವಾಗಿ ಇತಿಹಾಸ ನಿರ್ಮಿಸಿದೆ.

ಗ್ರಾಮೀಣ ಭಾಗದಲ್ಲಿ ಯಾರಾದರೂ ಮೃತರಾದಾಗ ಅವರ ಅಂತ್ಯಕ್ರಿಯೆ ನಡೆಸುವುದೇ ಒಂದು ಸವಾಲಾಗಿ ಪರಿಣಮಿಸಿತ್ತು. ಸ್ಥಳಾವಕಾಶದ ಕೊರತೆಯಿಂದ ಶವಗಳನ್ನು ಸುಡಲು ಸಾಧ್ಯವಾಗುತ್ತಿರಲಿಲ್ಲ. ಅಂತ್ಯಕ್ರಿಯೆಗಾಗಿ ಸರ್ಕಾರವು ಮೀಸಲಾಗಿರಿಸಿದ್ದ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಈ ಪ್ರಕರಣವು ನ್ಯಾಯಾಲಯದಲ್ಲಿದೆ. ಇಲ್ಲಿ ಯಾರಾದರೂ ಮೃತಪಟ್ಟರೆ ಸಮೀಪದಲ್ಲಿ ಸುಡುವ ವ್ಯವಸ್ಥೆ ಇಲ್ಲವಾಗಿದ್ದು, ಶವವನ್ನು 40 ಕಿ.ಮೀ ದೂರದ ಕುಂದಾಪುರದ ಚಿತಾಗಾರಕ್ಕೆ ಸಾಗಿಸಬೇಕಾಗುತ್ತಿತ್ತು ಮತ್ತು ಇದರಿಂದ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗುತ್ತಿದ್ದರು.

ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಅಧ್ಯಕ್ಷ ವಿಜಯ್ ಶಾಸ್ತ್ರೀ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಪೂಜಾರಿ ಸಂಚಾರಿ ಚಿತಾಗಾರವನ್ನು ಕೇರಳದ ಸ್ಟಾರ್ ಚೇರ್ ಕಂಪನಿಯಿಂದ 5.8 ಲಕ್ಷ ರೂ ಗಳಿಗೆ ಖರೀದಿಸಿದ್ದಾರೆ. 10 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬಳಸಿ ಎರಡು ಗಂಟೆಯೊಳಗೆ ದೇಹವನ್ನು ಸುಡಬಹುದಾಗಿದೆ.

ಕಳೆದ ವರ್ಷ ಡಿ.18 ರಂದು ಸಂಘದ ನೂತನ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ಘಟಕಕ್ಕೆ ಚಾಲನೆ ನೀಡಲಾಗಿದೆ. ಸಾಂಪ್ರದಾಯಿಕ ಸ್ಮಶಾನದಲ್ಲಿ ನೆರವೇರಿಸುವ ವಿಧಿ ವಿಧಾನಗಳನ್ನು ಇಲ್ಲಿಯೂ ಮಾಡುವ ಅನುಕೂಲವಿದ್ದು, ಹೊಗೆ ಅಥವಾ ದುರ್ವಾಸನೆ ಬೀರುವುದಿಲ್ಲ ಎನ್ನಲಾಗಿದೆ. ಅವಶ್ಯಕತೆ ಇದ್ದವರು ತಿಳಿಸಿದಲ್ಲಿ ವಾಹನವನ್ನು ಆಯಾ ಸ್ಥಳಕ್ಕೆ ಕಳುಹಿಸಿಕೊಡಲಾಗುವುದು ಮತ್ತು ಇದಕ್ಕೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ವರದಿಯಾಗಿದೆ.