ಹಾವೇರಿ: ಪಟಾಕಿ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ; ಮೂವರು ಸಜೀವ ದಹನ

ಹಾವೇರಿ: ಜಿಲ್ಲೆಯ ಪಟಾಕಿ ಗೋದಾಮಿನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡು ಮೂರು ಜನ ಸಾವನ್ನಪ್ಪಿದ್ದಾರೆ. ಮೂವರು ಮೃತರು ಗೋದಾಮಿನೊಳಗೆ ಸಂಪೂರ್ಣವಾಗಿ ಸುಟ್ಟುಹೋಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಜಿಲ್ಲೆಯ ಹಾವೇರಿ-ಹಾನಗಲ್ ಮುಖ್ಯರಸ್ತೆಯ ಆಲದಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರ ಗುರುತು ಇನ್ನೂ ಬಹಿರಂಗವಾಗಿಲ್ಲ, ಆದರೆ ಅವರೆಲ್ಲರೂ ಹಾವೇರಿ ಮೂಲದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗೋದಾಮಿನಲ್ಲಿ ಪಟಾಕಿ ತಯಾರಿಸುವ ಕಾರ್ಯ ಭರದಿಂದ ಸಾಗಿತ್ತು. ಬೆಂಕಿ ತಗಲಲು ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂವರು ಮೃತರ ಜೊತೆಗೆ ಗೋದಾಮಿನಲ್ಲಿದ್ದ 32 ವರ್ಷದ ವ್ಯಕ್ತಿ ಮೂರನೇ ಮಹಡಿಯಿಂದ ಜಿಗಿದು ಬೆಂಕಿಯಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾನೆ. ಬಿದ್ದ ರಭಸಕ್ಕೆ ಆತನಿಗೆ ಗಂಭೀರ ಗಾಯಗಳಾಗಿದ್ದು, ಪ್ರಜ್ಞೆ ತಪ್ಪಿ ದ್ದಾನೆ. ಆತ ದಾವಣಗೆರೆ ಜಿಲ್ಲೆಯ ಹರಿಹರ ಮೂಲದವನಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಗಳು ತಿಳಿಸಿವೆ.

ಮೃತರಿಗೆ ಐದು ಲಕ್ಷ ರೂ ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮಾಹಿತಿ ಪಡೆದ ಕೂಡಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.