ಪರಶುರಾಮ ಥೀಂ ಪಾರ್ಕ್‌ ತಳ ಭಾಗದಲ್ಲಿ ಅಗ್ನಿ ಅವಘಡ: ಥೀಂ ಪಾರ್ಕ್ ಸುರಕ್ಷಿತ

ಕಾರ್ಕಳ: ಪರಶುರಾಮ ಥೀಂ ಪಾರ್ಕ್‌ ನ ಬೈಲೂರು ಸಮೀಪದ ಉಮಿಕ್ಕಳ ಗುಡ್ಡದಲ್ಲಿ ರವಿವಾರ ಬೆಂಕಿ ಅವಘಡ ಸಂಭವಿಸಿರುವುದಾಗಿ ವರದಿಯಾಗಿದೆ.

ಗುಡ್ಡದ ತಳದಲ್ಲಿ ಅಪರಾಹ್ನ 3ರ ವೇಳೆಗೆ ಕಾಣಿಸಿಕೊಂಡ ಬೆಂಕಿ ಗಿಡ ಮರ ಬಳ್ಳಿಗೆ ಹತ್ತಿಕೊಂಡು ಗಾಳಿಗೆ ತೀವ್ರಗತಿಯಲ್ಲಿ ವ್ಯಾಪಿಸಿತ್ತು. ಸ್ಥಳೀಯರ ಮಾಹಿತಿಯಂತೆ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರು. ಆದರೆ ಬೆಂಕಿ ಹಬ್ಬಿಕೊಂಡ ಸ್ಥಳ ಬೆಟ್ಟದ ಕೆಳಗಿನ ಪ್ರದೇಶವಾಗಿದ್ದು ಅಲ್ಲಿಗೆ ತೆರಳಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಬೃಹತ್‌ ಪ್ರಮಾಣದ ಮುಳ್ಳು ಅಡ್ಡಿಯಾಗಿದ್ದು, ಬಳಿಕ ಅಗ್ನಿಶಾಮಕ ದಳದ ಸಿಬಂದಿ, ಸ್ಥಳೀಯರು ನೀರನ್ನು ಹೊತ್ತೊಯ್ದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಜೊತೆಗೆ ಅರಣ್ಯ ಇಲಾಖೆಯ ನೆರವನ್ನು ಪಡೆದುಕೊಳ್ಳಲಾಯಿತು. ಸುಮಾರು 30 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು ಸಂಜೆ 6ರ ವೇಳೆಗೆ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ.

ಪರಶುರಾಮ ಥೀಂ ಪಾರ್ಕ್‌ನ ತಳ ಭಾಗದಲ್ಲಿಯೇ ಬೆಂಕಿ ಅವಘಡ ಸಂಭವಿಸಿದೆಯಾದರೂ ಮಧ್ಯಭಾಗದಲ್ಲಿ ಖಾಲಿ ಬಂಡೆಗಳಿರುವ ಕಾರಣ ಬೆಂಕಿ ಮೇಲ್ಭಾಗಕ್ಕೆ ವ್ಯಾಪಿಸಿಲ್ಲ. ಪರಶುರಾಮ ಥೀಂ ಪಾರ್ಕ್‌ನ ವಿಗ್ರಹ ಕುರಿತು ವಿವಾದ ತಾರಕಕ್ಕೇರಿರುವ ಹೊತ್ತಲ್ಲೆ ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ಸಾಕಷ್ಟು ಚರ್ಚೆಗಳಿಗೆ ಎಡೆಮಾಡಿ ಕೊಟ್ಟಿದೆ.