ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ

ಉಡುಪಿ: ಚುನಾವಣಾ ಆಯೋಗದ ನಿರ್ದೇಶನ ಅನ್ವಯ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

2023 ಜನವರಿ 1 ರ ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ಐದು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಜನವರಿ 5 ರಂದು ಎಲ್ಲಾ ಮತಗಟ್ಟೆಗಳಲ್ಲಿ, ಉಪ ವಿಭಾಗೀಯ, ತಾಲೂಕು ಕಚೇರಿ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1,12,126 ಗಂಡಸರು, 1,17,421 ಮಹಿಳೆಯರು, 3 ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 2,29,550 ಮತದಾರರಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 98,224 ಗಂಡಸರು, 1,06,298 ಮಹಿಳೆಯರು, 3 ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 2,04,525 ಮತದಾರರಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 1,02,192 ಗಂಡಸರು, 1,09,439 ಮಹಿಳೆಯರು ಸೇರಿದಂತೆ ಒಟ್ಟು 2,11,631 ಮತದಾರರಿದ್ದು, ಅಲ್ಪಸಂಖ್ಯಾತ ಮತದಾರರಿರುವುದಿಲ್ಲ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ 88,114 ಗಂಡಸರು, 95,968 ಮಹಿಳೆಯರು, 6 ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 1,84,088 ಮತದಾರರಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 89,404 ಗಂಡಸರು, 97,047 ಮಹಿಳೆಯರು, ಸೇರಿದಂತೆ ಒಟ್ಟು 1,86,451 ಮತದಾರರಿದ್ದಾರೆ. ಜಿಲ್ಲೆಯ ಒಟ್ಟು 5 ವಿಧಾನಸಭಾ ಕ್ಷೇತ್ರಗಳಿಂದ 4,90,060 ಗಂಡಸರು, 5,26173 ಮಹಿಳೆಯರು, 12 ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 10,16,245 ಮತದಾರರಿದ್ದಾರೆ ಎಂದರು.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅವಧಿಯಲ್ಲಿ ಹೊಸದಾಗಿ 16,827 ಮತದಾರರು ಸೇರ್ಪಡೆಯಾದರೆ, 5783 ಮತದಾರರನ್ನು ತೆಗೆದುಹಾಕಲಾಗಿದೆ. 13,321 ತಿದ್ದುಪಡಿ ಹಾಗೂ ವರ್ಗಾವಣೆಗೊಳಿಸಲಾಗಿದೆ. ಈ ಬಾರಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಸಂದರ್ಭದಲ್ಲಿ 13,816 ಯುವ ಮತದಾರರು ಹಾಗೂ 11,331 ವಿಶೇಷ ಚೇತನರು ನೋಂದಣಿಯಾಗಿರುತ್ತಾರೆ ಎಂದರು.

ಸಾರ್ವಜನಿಕರು ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯುವ ಸಲುವಾಗಿ ಉಡುಪಿ ಜಿಲ್ಲಾ ಮಟ್ಟದಲ್ಲಿ ಮತದಾರರ ಸಹಾಯವಾಣಿ ಕೇಂದ್ರ ತೆರೆದು ಉಚಿತವಾಗಿ ಕರೆಗಳ ಮೂಲಕ ಮಾಹಿತಿಗಳನ್ನು ಪಡೆಯಲು ಟೋಲ್ ಪ್ರೀ ಸಂಖ್ಯೆ 1950 ಅಳವಡಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.

ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವು ಪುರಭವನ, ತಾಲೂಕು ಮತ್ತು ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಹಾಗೂ ವಿವಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.