ಫಿಫಾ ವಿಶ್ವಕಪ್ ಸೆಮಿಫೈನಲ್-ಫೈನಲ್ ಹಿನ್ನೆಲೆ: ಬೆಂಗಳೂರಿನಲ್ಲಿ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ತಡರಾತ್ರಿ 3.30ರವರೆಗೆ ಆಹಾರ ಸೇವೆಗೆ ಅನುಮತಿ

ಬೆಂಗಳೂರು,: ಫಿಫಾ ವಿಶ್ವಕಪ್ 2026ರ ನಿರ್ಣಾಯಕ ಪಂದ್ಯಗಳ ಹಿನ್ನೆಲೆಯಲ್ಲಿ ಬೆಂಗಳೂರು ಫುಟ್‌ಬಾಲ್ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ದಿನಗಳಲ್ಲಿ ನಗರದಲ್ಲಿನ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಬೆಳಗಿನ 3.30 ಗಂಟೆಯವರೆಗೆ ಆಹಾರ ಸೇವೆ ನೀಡಲು ಅನುಮತಿ ನೀಡಲಾಗಿದೆ.

ಈ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ರಾಷ್ಟ್ರೀಯ ರೆಸ್ಟೋರೆಂಟ್ ಸಂಘದ (NRAI) ಮನವಿಯನ್ನು ಪರಿಗಣಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ಆದೇಶದಂತೆ, ಜುಲೈ 14, 15 ಮತ್ತು 19ರಂದು ಮಧ್ಯರಾತ್ರಿಯ ನಂತರ ನಡೆಯುವ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುವ ಅಭಿಮಾನಿಗಳ ಅನುಕೂಲಕ್ಕಾಗಿ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಬೆಳಿಗ್ಗೆ 3.30 ಗಂಟೆಯವರೆಗೆ ಆಹಾರ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.

ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯನ್ನು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳು ಜಂಟಿಯಾಗಿ ಆಯೋಜಿಸಿದ್ದು, ಟೂರ್ನಿ ಅಂತಿಮ ಹಂತಕ್ಕೆ ತಲುಪಿದೆ. ಭಾರತೀಯ ಕಾಲಮಾನದ ಪ್ರಕಾರ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಮಧ್ಯರಾತ್ರಿ 12.30ಕ್ಕೆ ಆರಂಭವಾಗಲಿವೆ.

ಪಂದ್ಯಗಳ ವೇಳಾಪಟ್ಟಿ

  • ಮೊದಲ ಸೆಮಿಫೈನಲ್: ಜುಲೈ 15 – ರಾತ್ರಿ 12.30 (ಭಾರತೀಯ ಕಾಲಮಾನ)
  • ಎರಡನೇ ಸೆಮಿಫೈನಲ್: ಜುಲೈ 16 – ರಾತ್ರಿ 12.30
  • ಫೈನಲ್: ಜುಲೈ 20 – ರಾತ್ರಿ 12.30

ಪಂದ್ಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಆಗಮಿಸುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಈ ವಿಶೇಷ ಅನುಮತಿ ನೀಡಲಾಗಿದೆ. ಇದರಿಂದ ಬೆಂಗಳೂರು ಫುಟ್‌ಬಾಲ್ ಅಭಿಮಾನಿಗಳು ರಾತ್ರಿ ತಡವರೆಗೂ ಪಂದ್ಯ ವೀಕ್ಷಿಸುತ್ತಲೇ ಆಹಾರ ಸೇವೆಯನ್ನು ಸವಿಯಲು ಅವಕಾಶ ದೊರೆಯಲಿದೆ.