ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ. 11-21 ರವರೆಗೆ ಶರನ್ನವರಾತ್ರಿ ಮಹೋತ್ಸವದ ಸಡಗರ

ಕಮಲಶಿಲೆ: ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ಕ್ಷೇತ್ರದ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ಶರನ್ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಏನೇನು ವಿಶೇಷ?

ಮಹೋತ್ಸವದ ಅಂಗವಾಗಿ ಪ್ರತಿದಿನ ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ತ್ರಿಕಾಲ ಬಲಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಸಂಜೆ 7 ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 5.30ರಿಂದ 7.15ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ.

ಅ. 16ರಂದು ಶಾರದಾ ದೇವಿ ಪ್ರತಿಷ್ಠಾಪನೆಅಕ್ಟೋಬರ್ 16ರಂದು ಶುಕ್ರವಾರ ರಾತ್ರಿ ಶಾರದಾ ದೇವಿ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜೆ ನಡೆಯಲಿದೆ.

ಅ. 20ರಂದು ಚಂಡಿಕಾ ಯಾಗ, ರಜತ ರಥೋತ್ಸವಅಕ್ಟೋಬರ್ 20ರಂದು ಮಂಗಳವಾರ ನವಮಿಯ ಪ್ರಯುಕ್ತ ಮಧ್ಯಾಹ್ನ ಶ್ರೀ ಚಂಡಿಕಾ ಯಾಗ ನಡೆಯಲಿದೆ. ರಾತ್ರಿ ರಜತ ರಥೋತ್ಸವ ಹಾಗೂ ಪುಷ್ಪಕ ವಾಹನದಲ್ಲಿ ರಥಬೀದಿ ಮತ್ತು ರಾಜಬೀದಿಗಳಲ್ಲಿ ಪುರಮೆರವಣಿಗೆ ಜರುಗಲಿದೆ.

ಅ. 21ರಂದು ಕದಿರು ಮುಹೂರ್ತ, ವಿಜಯೋತ್ಸವಅಕ್ಟೋಬರ್ 21ರಂದು ಬುಧವಾರ ಬೆಳಗಿನ ಜಾವ 6.05ಕ್ಕೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ ಕಣಜ ತುಂಬಿಸುವುದು ಹಾಗೂ ಶಮೀ ಪೂಜೆ ನಡೆಯಲಿದೆ. ಸಂಜೆ ವಿಜಯೋತ್ಸವ ಜರುಗಲಿದೆ.

ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಪ್ರತಿದಿನ ಮಧ್ಯಾಹ್ನ ಚಂಡಿಕಾ ಯಾಗ, ಸಂಜೆ ಶ್ರೀ ರಂಗಪೂಜೆ ಹಾಗೂ ರಾತ್ರಿ ಬೆಳ್ಳಿ ರಥೋತ್ಸವ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ. ರಾತ್ರಿ ಉತ್ಸವದ ಬಳಿಕ ಸಿದ್ಧಾಪುರ ಹಾಗೂ ಹಳ್ಳಿಹೊಳೆ ಕಡೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಶರನ್ನವರಾತ್ರಿ ಮಹೋತ್ಸವಕ್ಕೆ ಭಕ್ತಾದಿಗಳು ಇಷ್ಟಮಿತ್ರರು ಹಾಗೂ ಬಂಧು-ಬಾಂಧವರೊಂದಿಗೆ ಆಗಮಿಸಿ, ಶ್ರೀ ದೇವಿಯ ಪೂಜಾ ಉತ್ಸವಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

ಯಕ್ಷಗಾನ ಮೇಳದ ಆಟಗಳ ಬುಕ್ಕಿಂಗ್ ಕುರಿತು ಮಾಹಿತಿಶ್ರೀ ಕ್ಷೇತ್ರ ಕಮಲಶಿಲೆ ದಶಾವತಾರ ಯಕ್ಷಗಾನ ಮೇಳದ 2026-27ನೇ ಸಾಲಿನ ತಿರುಗಾಟವನ್ನು ದೇವಸ್ಥಾನದ ವತಿಯಿಂದ ನಡೆಸಲಾಗುತ್ತಿದ್ದು, ಈ ಸಾಲಿನ ಎಲ್ಲಾ ಆಟಗಳು ಬುಕ್ಕಿಂಗ್ ಆಗಿವೆ.

2027-28ನೇ ಸಾಲಿನಲ್ಲಿ ಯಕ್ಷಗಾನ ಆಟ ಆಡಿಸಲು ಬಯಸುವವರು ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.