ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಯಕರ ಶೆಟ್ಟಿ ಇಂದ್ರಾಳಿಯವರ ಅಭಿನಂದನಾ ಕಾರ್ಯಕ್ರಮ 

ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ‘ಸಹಕಾರಿ ರತ್ನ ಪ್ರಶಸ್ತಿ’ ಪುರಸ್ಕೃತ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಇವರ ಅಭಿನಂದನಾ ಹಾಗೂ ಸೇವಾ ಚಿಂತನಾ ಕಾರ್ಯಕ್ರಮವನ್ನು ರವಿವಾರದಂದು ಉಡುಪಿ ಮಿಷನ್ ಕಾಂಪೌಂಡ್‌ನ ಬಾಸೆಲ್ ಮಿಷನರೀಸ್ ಅಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಸಹಕಾರ ಮಾರಾಟ ಮಂಡಳಿ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಮುಳುಗುತ್ತಿರುವ ಸಹಕಾರಿ ಸಂಸ್ಥೆಯನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುವುದರೊಂದಿಗೆ ತಾನೂ ಬಹು ಎತ್ತರಕ್ಕೆ ಬೆಳೆಯ ಬಹುದು ಎಂಬುದನ್ನು ಜಯಕರ ಶೆಟ್ಟಿ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಅತ್ಯುತ್ತಮ ಕಾರ್ಯವೈಖರಿ, ಶ್ರದ್ಧೆ, ಪರಿಶ್ರಮದ ಮೂಲಕ ಸೊಸೈಟಿಯ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಕರ್ತವ್ಯದಲ್ಲಿ ಛಲ, ಶ್ರದ್ಧೆ, ಕಠಿನ ಪರಿಶ್ರಮ, ಪ್ರಾಮಾಕತೆ, ಬದ್ಧತೆ ಮೈಗೂಡಿಸಿಕೊಂಡಾಗ ಯಶಸ್ಸು ಸಾಸಬಹುದು ಎಂಬುದನ್ನು ತನ್ನ ಜೀವನದಲ್ಲಿ ಕಂಡುಕೊಂಡಿದ್ದೇನೆ. ಆಡಳಿತ ಮಂಡಳಿ, ಸಿಬಂದಿ ವರ್ಗ, ಠೇವಣಿದಾರರು, ಗ್ರಾಹಕರ ಹಾಗೂ ಅಭಿವೃದ್ಧಿಗೆ ಕಾರಣರಾದ ಸರ್ವರ ಪೂರ್ಣ ಸಹಕಾರದಿಂದ ಸಂಸ್ಥೆಯ ಬೆಳವಗೆಗೆ ಕಾರಣವಾಯಿತೇ ಹೊರತೂ ಒಬ್ಬ ವ್ಯಕ್ತಿಯಿಂದಲ್ಲ ಎಂದರು.

ಜಯಕರ ಶೆಟ್ಟಿ ಯವರ ‘ಜಯಪಥ’ ಅಭಿನಂದನ ಗ್ರಂಥವನ್ನು ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಅಧ್ಯಕ್ಷ ಕರ್ನಿರೆ ಹರೀಶ ಶೆಟ್ಟಿ, ಹಿರಿಯ ಸಹಕಾರಿ ಟಿ.ಶಂಭು ಶೆಟ್ಟಿ, ಸಹಕಾರಿ ಸಂಘಗಳ ಲೆಕ್ಕಪರಿಶೋಧನ ಉಪನಿರ್ದೇಶಕ ಗಣೇಶ್ ಮಯ್ಯ ಶುಭಾಸಂಸನೆಗೈದರು.

2022ನೇ ಸಾಲಿನ ‘ಸಹಕಾರಿ ರತ್ನ ಪ್ರಶಸ್ತಿ’ ಪುರಸ್ಕೃತ, ಮಹಾಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಲಯನ್ಸ್ ಗವರ್ನರ್ ಎಂ.ಕೆ. ಭಟ್, ಬಾಸೆಲ್ ಮಿಷನರೀಸ್ ಚರ್ಚ್‌ನ ಸೈಮನ್ ಇವರನ್ನು ಅಭಿನಂದಿಸಲಾಯಿತು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ಅಭಿನಂದನ ಸಮಿತಿ ಸಂಚಾಲಕ ಪುರುಷೋತ್ತಮ ಪಿ.ಶೆಟ್ಟಿ, ಶ್ವೇತಾ ಜಯಕರ ಶೆಟ್ಟಿ, ಶ್ರಮ್ಯಾ ಶೆಟ್ಟಿ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೊಸೈಟಿಯ ಪ್ರಭಾರ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್ ಸ್ವಾಗತಿಸಿದರು. ಸನ್ಮಾನ ಪತ್ರವನ್ನು ಪ್ರಸನ್ನ ಶೆಟ್ಟಿ, ಸೇವಾ ಚಿಂತನ ಪತ್ರವನ್ನು ನವೀನ್ ಕೆ. ವಾಚಿಸಿದರು. ಶಾಖಾ ವ್ಯವಸ್ಥಾಪಕ ಪ್ರವೀಣ್ ಕುಮಾರ್ ವಂದಿಸಿದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.