ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ಕಾರ್ಯಕರ್ತರ ಅಭಿನಂದನಾ ಸಮಾರಂಭ

ಕೊಡವೂರು: ಕೊಡವೂರು ವಾರ್ಡಿನ ಕಾರ್ಯಕರ್ತರ ಅಭಿನಂದನಾ ಸಭೆಯು ಫೆ.26 ಭಾನುವಾರದಂದು ಕೊಡವೂರಿನ ವಿಪ್ರ ಶ್ರೀ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ.ಎಫ್ ನ ಮಾಜಿ ಅಧ್ಯಕ್ಷ ರವಿರಾಜ್ ಹೆಗ್ಡೆ, ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ರಚನೆ ಮಾಡಿ ಆ ಮೂಲಕ ಕೊಡವೂರು ಗ್ರಾಮದ ಸರ್ವೆ ನಡೆಸಿ ಆ ಸರ್ವೆಯಲ್ಲಿ ಒಟ್ಟು 792 ಮನೆಗಳು, 51 ಕೃಷಿಕರು, 432 ಬಾವಿಗಳು, 90 ನಿರುಪಯುಕ್ತ ಬಾವಿಗಳು ಕಂಡುಬಂದಿವೆ. ಕೊಡವೂರಿನ ಸಮಸ್ಯೆ, ಸವಾಲು ಮತ್ತು ಅಪೇಕ್ಷೆಗಳನ್ನು ತಿಳಿಯುವ ಪ್ರಯತ್ನ ನಡೆದ ಬಳಿಕ ಇದನ್ನು ಕೇವಲ ನಗರಸಭೆ ಸದಸ್ಯರಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ, ಎಲ್ಲಾ ಕಾರ್ಯಕರ್ತರ ಸಹಕಾರವಿದ್ದಾಗ ಮಾದರಿ ಗ್ರಾಮವನ್ನಾಗಿಸಲು ಸಾಧ್ಯ ಎಂದರಿತು ಒಟ್ಟು 17 ಸಮಿತಿಗಳನ್ನು ರಚಿಸಿ ಆ ಸಮಿತಿಯ ಮೂಲಕ ಸಮಸ್ಯೆಗಳಿಗೆ ನ್ಯಾಯ ಕೊಡುವ ಪ್ರಯತ್ನವಾಗಿದೆ. ಅಲ್ಲದೆ, ಕೇಂದ್ರ, ರಾಜ್ ಹಾಗೂ ನಗರಸಭೆಯ ಎಲ್ಲಾ ಯೋಜನೆಗಳ ಬಗ್ಗೆ ಎಲ್ಲ ಇಲಾಖೆಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ತಿಳಿಸಲಾಗಿದೆ.

ಸರಕಾರ ಮಾತ್ರವಲ್ಲದೆ ನಾಗರಿಕರ ಮನವೊಲಿಸಿ ಸಾರ್ವಜನಿಕರಿಗೆ ಬೇಕಾಗುವಂತಹ ಹಲವಾರು ಸವಲತ್ತುಗಳನ್ನು ನೀಡುವ ಕಾರ್ಯ ನಡೆದಿದೆ.

ಅದೇ ರೀತಿ ಇಂದ್ರಾಣಿ ನದಿಯ ಸಮಸ್ಯೆ, ರಸಾಯನಿಕಯುಕ್ತ ಆಹಾರ ಸಮಸ್ಯೆ, ಉದ್ಯೋಗದ ಸಮಸ್ಯೆ ಹಾಗೂ ಹಲವಾರು ಸಮಸ್ಯೆ ಮತ್ತು ಅದರ ಪರಿಹಾರದ ಬಗ್ಗೆ ಚರ್ಚಿಸಲಾಯಿತು. ಕೊಡವೂರು ವಾರ್ಡಿನಲ್ಲಿ 28 ಮನೆಗಳು ಮತಾಂತರ ಆಗಿರುವುದು ಅತೀ ದೊಡ್ಡ ಸಮಸ್ಯೆಯಾಗಿದ್ದು, ಪ್ರಸ್ತುತ 3 ಕಾಲೇಜು ವಿದ್ಯಾರ್ಥಿನಿಯರು ಮತಾಂತರವಾಗಿದ್ದಾರೆ. ಇದನ್ನು ಸರಿಪಡಿಸಬೇಕಾದರೆ ಒಂದು ತಂಡದ ಅವಶ್ಯಕತೆ ಹಾಗೂ ಧರ್ಮ ಶಿಕ್ಷಣದ ಅವಶ್ಯ ಇದ್ದು ಅದಕ್ಕೂ ಒಂದು ತಂಡವನ್ನು ರಚನೆ ಮಾಡಿ ಕಾರ್ಯ ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಎಲ್ಲಾ ಸಮಸ್ಯೆಗಳಿಗೂ ಸಮಿತಿಯನ್ನು ರಚನೆ ಮಾಡಿ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಕಾರ್ಯ ರಾಜ್ಯ ಹಾಗೂ ದೇಶಕ್ಕೆ ಮಾದರಿ ಎಂದು ಅವರು ಅಭಿಪ್ರಾಯಪಟ್ಟರು.

ಬಳಿಕ ಸಾರ್ವಜನಿಕರಿಂದ ಸಂಗ್ರಹಿಸಲಾದ 39,77,155.00 ರೂಪಾಯಿ ಮೊತ್ತದ ಸೇವಾ ಕಾರ್ಯದ ಲೆಕ್ಕವನ್ನು ನಾಗರಿಕರ ಮುಂದಿಡಲಾಯಿತು.

ವಿಜಯ್ ಕೊಡವೂರು ಮಾತನಾಡಿ ಈ ಸೇವೆಯನ್ನು ರಾಜಕೀಯ ಲಾಭ ಅಥವಾ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸ್ಥಾನಕ್ಕಾಗಿ ಮಾಡುತ್ತಿಲ್ಲ. ಸೇವೆ ಎನ್ನುವುದು ನಮ್ಮ ಜೀವನದ ಅಂಗವಾಗಿರಬೇಕು, ಆ ದೃಷ್ಟಿಯಿಂದ ಈ ಸೇವೆಯನ್ನು ಮಾಡಲು ಸಾಧ್ಯವಾಗಿದೆ.
ಮುಂದಿನ ದಿನಗಳಲ್ಲಿ ಹಿರಿಯರು ನೀಡುವ ಜವಾಬ್ದಾರಿಯನ್ನು ಎಲ್ಲವನ್ನೂ ಮಾಡಲು ಸಿದ್ದನಿದ್ದೇನೆ ಎಂದು ತಿಳಿಸಿದರು.

ಕೊಡವೂರು ಸಿ.ಎ ಬ್ಯಾಂಕಿನ ಅಧ್ಯಕ್ಷ ನಾರಾಯಣ್ ಬಲ್ಲಾಳ್, ಕೊಡವೂರು ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಕಾಳು ಶೇರಿಗಾರ್, ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಚಂದ್ರಾವತಿ, ಹಿಂದೂ ಯುವ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಅಜಿತ್ ಕೊಡವೂರು, ದಿವ್ಯಾಂಗ ರಕ್ಷಣಾ ಸಮಿತಿ ಅಧ್ಯಕ್ಷ ಹರೀಶ್, ವಾಸ್ ವೆಲ್ಡ್ ಫರೆರಾ, ರಮೇಶ್ ಮಾಸ್ಟರ್ ಕೊಪ್ಪಳ ತೋಟ,
ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.