ಉಡುಪಿ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಹಾಗೂ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಶನ್ ಸಹಯೋಗದಲ್ಲಿ ‘ಮಣಿಪಾಲ್ ಮ್ಯಾರಥಾನ್–2020’ ಫೆ. 9ರಂದು ಬೆಳಿಗ್ಗೆ 5.15ಕ್ಕೆ ಮಣಿಪಾಲದಲ್ಲಿ ನಡೆಯಲಿದೆ.
ಇದು ನಾಲ್ಕನೇ ಆವೃತ್ತಿಯ ಮಣಿಪಾಲ್ ಮ್ಯಾರಥಾನ್ ಆಗಿದ್ದು, ಇದರಲ್ಲಿ ‘ಅಂಗಾಗಗಳ ದಾನ’ದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಮಾಹೆ ಕುಲಪತಿ ಡಾ. ಎಚ್.ಎಸ್. ಬಲ್ಲಾಳ್ ಬುಧವಾರ ತಿಳಿಸಿದರು.
42 ಕಿ.ಮೀ ವಿಭಾಗದಲ್ಲಿ 75 ಸ್ಪರ್ಧಿಗಳು ಭಾಗವಹಿಸುತ್ತಿದ್ದು, 21 ಕಿ.ಮೀ. ವಿಭಾಗದಲ್ಲಿ 300, 10 ಕಿ.ಮೀ. ವಿಭಾಗದಲ್ಲಿ 600, 5 ಕಿ.ಮೀ. ವಿಭಾಗದಲ್ಲಿ 1,200 ಹಾಗೂ 3 ಕಿ.ಮೀ. ವಿಭಾಗದಲ್ಲಿ 7000 ಸ್ಪರ್ಧಿಗಳು ಸೇರಿ ಒಟ್ಟು 10 ಸಾವಿರ ಮಂದಿ
ಭಾಗವಹಿಸಲಿದ್ದಾರೆ ಎಂದರು.
6 ವಿಭಾಗಗಳಲ್ಲಿ ಮ್ಯಾರಥಾನ್ ನಡೆಯುತ್ತಿದ್ದು, 18 ರಿಂದ 40 ವರ್ಷದೊಳಗಿನವರು, 41 ರಿಂದ 55, 56ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆಗಳಿವೆ. ಪ್ರತಿ ವಿಭಾಗಕ್ಕೂ ನಗದು ಬಹುಮಾನ ಹಾಗೂ ಟ್ರೋಫಿ ಇರಲಿದೆ ಎಂದು ಮಾಹಿತಿ ನೀಡಿದರು.
ವಿದೇಶಿ ಸ್ಪರ್ಧಿಗಳು ಭಾಗಿ:
ಕೀನ್ಯಾದ 6 ಹಾಗೂ ಯುಕೆಯ ಒಬ್ಬರು ಹಾಗೂ ಶ್ರೀಲಂಕಾದಿಂದಲೂ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಮ್ಯಾರಥಾನ್‌ಗೆ ಒಂದುದಿನ ಮುಂಚಿತವಾಗಿ ಸ್ಪರ್ಧಿಗಳ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು. ಸ್ಪರ್ಧಿಗಳು ಸಾಗುವ ಮಾರ್ಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ತಂಪು ಪಾನೀಯ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮಾರ್ಗಗಳ ವಿವರ ಹಾಕಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂಇಎಂಜಿ ಸಿಇಒ ಎಂಡಿ ಡಾ.ರಂಜನ್ ಪೈ, ಐಸಿಐಸಿಐ ಬ್ಯಾಂಕ್‌ನ ವೆಲ್ತ್ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಗಿರೀಶ್ ಸೆಹಗಲ್, ಬ್ಯಾಂಕ್ ಆಫ್ ಬರೋಡದ ಪ್ರಾದೇಶಿಕ ಮ್ಯಾನೇಜರ್ ರವೀಂದ್ರ ರೈ, ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಭಾಸ್ಕರ್ ಹಂದೆ, ರಾಜ್ಯ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೊ, ಎಸ್‌ಪಿ ವಿಷ್ಣುವರ್ಧನ, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷ ಎಚ್.ಟಿ.ಮಹಾದೇವ್, ಮಾಹೆ ಸಹ ಉಪಕುಲಪತಿ ವಿ.ಸುರೇಂದ್ರ ಶೆಟ್ಟಿ, ಯುನೈಟೆಡ್ ಟೊಯೊಟ ಸೇಲ್ಸ್ ಎಜಿಎಂ ಸುಪ್ರೇಮ್ ಪೂಜಾರಿ ಇದ್ದರು.